ಯಾದಗಿರಿ: ರಾಜ್ಯದಲ್ಲಿ ಆಡಳಿತ ನಡೆಸು ತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಭ್ರಮನಿರಸನವಾಗಿದ್ದು, ಜಿ. ಪಂ. ಹಾಗೂ ತಾ. ಪಂ. ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವು ನಿಶ್ಚಿತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾ ಯಿತಿ ಚುನಾವಣೆಯ ಪ್ರಚಾರದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಚುನಾವಣೆಗಳು ಕಾರ್ಯಕರ್ತರ ಚುನಾವಣೆ. ಬಿಜೆಪಿಯ ಮೇಲೆ ಜನರು ಅಪಾರ ನಂಬಿಕೆ ಇಟ್ಟಿದ್ದಾರೆ. ಇದರಿಂದಾ ಗಿ ಸಹಜವಾಗಿಯೇ ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ.
ಪಕ್ಷ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ಪಕ್ಷದ ಮುಖಂಡರು ಯಾರಿಗೇ ಟಿಕೆಟ್ ನೀಡಿದರೂ, ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬುದೇ ತಿಳಿಯುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿತ, ಜೂಜು, ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿವೆ. ಇದರಿಂದ ಬಡ ಕುಟುಂಬಗಳು ಬೀದಿ ಪಾಲಾಗುತ್ತಿದ್ದು, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶ ಗ್ರಾಮೀಣಾಭಿವೃದ್ಧಿ ಮಂಡಳಿಗೆ ₹ 2012 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಹಣ ಮಂಜೂರು ಮಾಡಿದ್ದು, ಕೇವಲ ₹ 800 ಕೋಟಿ ಬಿಡುಗಡೆ ಮಾಡಿದೆ.
ಇದರಲ್ಲಿ ಕೇವಲ ₹ 350 ಕೋಟಿ ಮಾತ್ರ ಬಳಕೆಯಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಶೇ 17 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಇದನ್ನು ನೋಡಿದರೆ, ರಾಜ್ಯದ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ. ಕಾರ್ಯಕರ್ತರನ್ನು ನಾಯಕರನ್ನಾಗಿ ರೂಪಿಸುವ ಈ ಚುನಾವಣೆಯಲ್ಲಿ. ಬಿಜೆಪಿ ಅಮೋಘ ಗೆಲುವು ಸಾಧಿಸಲಿದೆ. ಇದಕ್ಕಾಗಿ ಎಲ್ಲ ಮುಖಂಡರು, ಕಾರ್ಯಕ ರ್ತರು ಸಿದ್ಧತೆ ನಡೆಸಿದ್ದು, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಲು ಸಜ್ಜಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮಾತನಾಡಿ, ಯಾದಗಿರಿ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ತಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ಅದರಂತೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಸಂಸದ ಭಗವಂತ ಖೂಬಾ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರಡ್ಡಿ ನಾಯ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ಗುರುನಾಥ ಜ್ಯಾಂತಿಕರ್, ಅಶೋಕ ಗಸ್ತಿ, ವೆಂಕಟ ರಡ್ಡಿ ಮುದ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಡಾ. ಮಲ್ಲಣಗೌಡ ಉಕ್ಕಿನಾಳ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವರಾಜ ನಾಯಕ, ಸಾಯಿಬಣ್ಣ ಬೋರಬಂಡಾ, ಸಿದ್ಧನಗೌಡ ಕಾಡಂನೋರ್, ಎಸ್.ಪಿ. ನಾಡೇಕರ ಇದ್ದರು. ನೀಲಕಂಠರಾಯ ಯಲ್ಹೇರಿ ನಿರೂಪಿಸಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮಾಗನೂರ ಸ್ವಾಗತಿಸಿ, ವಂದಿಸಿದರು.
***
ಪಕ್ಷದ ಮುಖಂಡರ ಒಗ್ಗಟ್ಟಿನಿಂದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಇದು ಮುಂದುವರಿಯಲಿ.
-ಜಗದೀಶ ಶೆಟ್ಟರ, ವಿಧಾನಸಭೆ ಪ್ರತಿಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.