ADVERTISEMENT

ಹೈಟೆಕ್ ಬಸ್ ನಿಲ್ದಾಣದಲ್ಲಿ ಶೌಚಕ್ಕಿಲ್ಲ ವ್ಯವಸ್ಥೆ

ಗುರುಮಠಕಲ್ ಬಸ್‌ನಿಲ್ದಾಣದ ಶೌಚಾಲಯದ ದುಸ್ಥಿತಿ; ಪ್ರಯಾಣಿಕರಿಗೆ ಬಯಲೇ ಗತಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 13:47 IST
Last Updated 11 ಏಪ್ರಿಲ್ 2018, 13:47 IST
ಗುರುಮಠಕಲ್ ಬಸ್ ನಿಲ್ದಾಣದಲ್ಲಿನ ದುರಸ್ತಿಯಾಗದ ಶೌಚಾಲಯದ ದಾರಿಯನ್ನು ಮುಳ್ಳಿನಿಂದ ಮುಚ್ಚಿರುವುದು
ಗುರುಮಠಕಲ್ ಬಸ್ ನಿಲ್ದಾಣದಲ್ಲಿನ ದುರಸ್ತಿಯಾಗದ ಶೌಚಾಲಯದ ದಾರಿಯನ್ನು ಮುಳ್ಳಿನಿಂದ ಮುಚ್ಚಿರುವುದು   

ಗುರುಮಠಕಲ್: ನೂತನ ತಾಲ್ಲೂಕು ಕೇಂದ್ರವಾದ ಪಟ್ಟಣದಲ್ಲಿ ಈಚೆಗೆ ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೇ ಪ್ರಯಾಣಿಕರ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬಸ್‌ ನಿಲ್ದಾಣದ ಪಕ್ಕದಲ್ಲಿ ಈ ಹಿಂದೆ ನಿರ್ಮಿಸಲಾಗಿರುವ ಶೌಚಾಲಯವನ್ನು ಸ್ವಚ್ಛಗೊಳಿಸದೆ ಹಾಗೇ ಬಿಟ್ಟಿರುವುದರಿಂದ ಇಲ್ಲಿನ ಪರಿಸರವೆಲ್ಲ ಗಬ್ಬು ವಾಸನೆಯಿಂದ ಕೂಡಿದೆ. ಇಲ್ಲಿಗೆ ಬರುವ ಬಹುತೇಕ ಪ್ರಯಾಣಿಕರಿಗೆ ಬಯಲನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.

ಸುತ್ತಲಿನ ಗ್ರಾಮಗಳಿಂದ ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರ ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಮಹಿಳೆಯರ ಪಾಡು ಹೇಳತೀರದು. ಪುರುಷ ಪ್ರಯಾಣಿಕರು ಬಸ್‌ ನಿಲ್ದಾ ಣದ ಕಾಂಪೌಂಡ್‌ ಹಾಗೂ ಇತರೆ ಪ್ರದೇಶವನ್ನು ಶೌಚಾಲಯವನ್ನಾಗಿ ಮಾಡಿಕೊಂಡಿದ್ದು ಇದರಿಂದಾಗಿ ನಿಲ್ದಾ ಣದ ಸುತ್ತಲಿನ ಪ್ರದೇಶವು ಬಯಲು ಬಹಿರ್ದೆಸೆ ಪ್ರದೇಶವಾಗಿ ಮಾರ್ಪಟ್ಟಿದೆ.

ADVERTISEMENT

‘ಮಹಿಳೆಯರು ಶೌಚಕ್ರಿಯೆಗೆ ತುಂಬಾ ಪರದಾಡಬೇಕಿದ್ದು, ಶೌಚಾಲಯದ ಈ ಸಮಸ್ಯೆಯಿಂದಾಗಿ ಮಹಿಳೆಯರು ಮುಜಗರಕ್ಕೆ ಒಳಗಾಗುವಂತಾಗಿದೆ. ಮಹಿಳೆಯರು ತಮ್ಮ ಮನೆಗಳಿಗೆ ವಾಪಸ್‌ ತೆರಳುವವರೆಗೆ ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪುವವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ. ಶೀಘ್ರವೇ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪುರಸಭೆ ಸದಸ್ಯೆ ಶಾರದಾ ಶಿವಕುಮಾರ ಕಡೇಚೂರ ಒತ್ತಾಯಿಸಿದ್ದಾರೆ.

‘ನಿಲ್ದಾಣದಲ್ಲಿ ಶೌಚಾಲಯ ಹದಗೆಟ್ಟು ತಿಂಗಳಾದರೂ ಯಾರೊ ಬ್ಬರೂ ಇತ್ತ ಯೋಚಿಸದಿರುವುದು ನಮ್ಮ ದೌರ್ಭಾಗ್ಯ. ಜನದಟ್ಟಣೆಯ ಇಂತಹ ಸ್ಥಳದಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ’ ಎಂದು ನಿವೃತ್ತ ಶಿಕ್ಷಕ ಲಕ್ಷ್ಮಯ್ಯ ಗೌಡ್ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಪೌಂಡ್‌ಗೆ ಮೂತ್ರವಿಸರ್ಜನೆ ಮಾಡುವುದರಿಂದ ಬಸ್ ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡೆ ಕೂರುವ ಸ್ಥಿತಿಯುಂಟಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ವಚ್ಛತೆಯೇ ಕಾಣದ ಪಟ್ಟಣದ ಹೈಟೆಕ್‌ ಬಸ್‌ ನಿಲ್ದಾಣ ಇದಾಗಿದೆ’ ಎನ್ನುತ್ತಾರೆ ಪ್ರಯಾಣಿಕರು.

**

ಬಸ್ ನಿಲ್ದಾಣಕ್ಕೆ ಹೊಂದಿ ಕೊಂಡತೆ ಕೆಳ ಭಾಗದಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಲಾಗಿದೆ. ದುರಸ್ತಿ ಮಾಡಬೇಕಿರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ – ಫಾರೂಖ್ ಹುಸೇನ್, ವ್ಯವಸ್ಥಾಪಕ, ಗುರುಮಠಕಲ್‌ ಬಸ್ ಡಿಪೊ.

**

ಬಸ್ ನಿಲ್ದಾಣಕ್ಕೆ ಹೊಂದಿಕೊಂಡತೆ ಕೆಳ ಭಾಗದಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಲಾಗಿದೆ. ಅಲ್ಲದೆ ಸ್ವಲ್ಪ ದುರಸ್ತಿ ಮಾಡಬೇಕಿರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ – ಫಾರೂಖ್ ಹುಸೇನ್,ವ್ಯವಸ್ಥಾಪಕ, ಗುರುಮಠಕಲ್‌ ಬಸ್ ಡಿಪೊ.

**

ಮಲ್ಲಿಕಾರ್ಜುನ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.