ADVERTISEMENT

ಹೊಂದಾಣಿಕೆಗೆ `ಸುಗ್ಗಿ' ಕಾಲ ಶುರು!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:28 IST
Last Updated 12 ಡಿಸೆಂಬರ್ 2012, 10:28 IST

ಶಹಾಪುರ: ಕೆಜೆಪಿ ಪಕ್ಷದ ಉಗಮದಿಂದ ತಾಲ್ಲೂಕಿನಲ್ಲಿ ರಾಜಕೀಯ ಮುಖಂಡರ ಪಲ್ಲಟ ಶುರುವಾಗಿದೆ. ಬಿಜೆಪಿಯ ಒಂದು ಗುಂಪು ಯಾವ ಕಡೆ ಅಪ್ಪಿಕೊಳ್ಳಬೇಕೆಂಬ ತಟಸ್ಥ ನಿಲುವು ತಾಳಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಕಾದು ನೋಡುವ ತಂತ್ರಕ್ಕೆ ಹೆಚ್ಚಿನ ರಾಜಕೀಯ ಮುಖಂಡರು ಜೋತು ಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಪ್ರಭಾವಿ ನಾಯಕರು ರಾಜಕೀಯ ಮುತ್ಸದ್ದಿತನಕ್ಕಿಂತ ಅನುಕೂಲ ಸಿಂಧು ರಾಜಕಾರಣಕ್ಕೆ ಶರಣಾಗಿದ್ದಾರೆ. ಪಕ್ಷಕ್ಕಿಂತ ಗೆಲುವು ಮುಖ್ಯ ಎನ್ನುವಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ `ರಾಜುಗೌಡ ನಾಯಕರ ನಡೆ ಕಾಂಗ್ರೆಸ್ ಪಕ್ಷದ ಕಡೆ' ಬಿಜೆಪಿಯ ಜಿಲ್ಲಾ ಅಧ್ಯಕ್ಷ ವೀರಬಸವಂತರಡ್ಡಿ ಮುದ್ನಾಳ ಪಕ್ಷಕ್ಕೆ ಗುಡಬೈ ಹೇಳಿ ಕೆಜೆಪಿಗೆ ಜಂಪ್ ಮಾಡಿದ್ದಾರೆ. ಹಿಂದೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಶಾಸಕರಾಗಿರುವ ಶರಣಬಸಪ್ಪ ದರ್ಶನಾಪುರ, ಕಾಂಗ್ರೆಸ್‌ನಿಂದ ಸಿಡಿದು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲುಂಡ ದಿ.ಶಿವಶೇಖರಪ್ಪಗೌಡ ಸಿರವಾಳ ಹೀಗೆ ರಾಜಕೀಯ ಹೊಂದಾಣಿಯ ಪರ್ವದ ಸ್ಯಾಂಪಲ್ ಆಗಿದೆ ಎನ್ನುತ್ತಾರೆ ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ.

ತಿಂಗಳು ಹಿಂದಷ್ಟೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಡಾ.ಚಂದ್ರಶೇಖರ ಸುಬೇದಾರ ಹಾವೇರಿ ಕೆಜಿಪಿ  ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ನಿರೀಕ್ಷೆಯಂತೆ ಕೆಜೆಪಿ ತೆಕ್ಕೆಗೆ ಜಿಗಿದಿದ್ದಾರೆ. ವಿಚಿತ್ರವೆಂದರೆ ಡಾ. ಸುಬೇದಾರ ಸಹೋದರ ಜಿಲ್ಲಾ ಪಂಚಾಯಿತಿ ಸದಸ್ಯ ನಾಗಣ್ಣಗೌಡ ಸುಬೇದಾರ, ಬಸಣ್ಣಗೌಡ ಸುಬೇದಾರ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿದ್ದು ಮೌನಕ್ಕೆ ಶರಣಾಗಿದ್ದಾರೆ. ತಮ್ಮ ನಡೆ ಬಗ್ಗೆ ಬಹಿರಂಗಪಡಿಸಿಲ್ಲ.

ಬಿಜೆಪಿಯ ಹಿರಿಯ ಮುಖಂಡರಾದ ಡಾ.ಮಲ್ಲಣ್ಣಗೌಡ ಉಕ್ಕಿನಾಳ ಬಿಜೆಪಿ- ಕೆಜೆಪಿ ಎರಡು ದಡದ ಮೇಲೆ ಸವಾರಿ ಮಾಡುತ್ತಿದ್ದಾರೆ. ಇನ್ನೂ ಸ್ಪಷ್ಟವಾದ ನಿಲುವು ಹೊಂದದೆ ಹಾರಿಕೆ ಉತ್ತರ ನೀಡುತ್ತಾ ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಬಿಜೆಪಿ ಪ್ರಮುಖ ಗುಂಪು ಗುರುಪಾಟೀಲ್ ಸಿರವಾಳ ಹಾಗೂ ತಂಡ ಮಾತ್ರ ತಟಸ್ಥ ನಿಲುವು ಅಂಟಿಕೊಂಡಿದೆ. ಎಲ್ಲಿ ಉಳಿದುಕೊಳ್ಳಬೇಕು ಇಲ್ಲವೆ ಎತ್ತ ಪಯಣ ಸಾಗಬೇಕು ಎಂಬ ತೋರಿಕೆ ವ್ಯಕ್ತಪಡಿಸುತ್ತಲೇ ಗೌಪ್ಯವಾಗಿ ಕೆಲ ರಾಜಕೀಯ ಪಕ್ಷಗಳಮುಖಂಡರ ಜೊತೆ ಮೊಬೈಲ್ ಸಂಭಾಷಣೆ ಜೋರಾಗಿದೆ. ಬಿಎಸ್ಸಾರ್ ಪಕ್ಷ ಗಾಳ ಹಾಕಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ತಾಲ್ಲೂಕಿನ ಅಧಿನಾಯಕ ಶಾಸಕ ಶರಣಬಸಪ್ಪ ದರ್ಶನಾಪುರ ಈಗಾಗಲೇ ಕೆಲ ತಿಂಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತಾ ಪಕ್ಷಕ್ಕಿಂತ ತಮ್ಮ ಬೆಂಬಲವನ್ನು ಗಟ್ಟಿಗೊಳಿಸುತ್ತಾ ಸಾಗಿದ್ದಾರೆ. ಕೆಲ ಕಾರ್ಯಕರ್ತರು ನೇರವಾಗಿ ತಕರಾರು ತೆಗೆದಾಗ ತಣ್ಣಗೆ ಬೆಣ್ಣೆಯಂತೆ ಕರಗಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಶಾಸಕರ ಕೆಲ ಹಿಂಬಾಲಕರ ಬಗ್ಗೆ ಮಾತ್ರ ಜನತೆಯಲ್ಲಿ ತೀವ್ರ ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದು, ಇದು ಬಿಸಿ ತುಪ್ಪುವಾಗಿ ಪರಿಣಮಿಸಿದೆ. ಜೆಡಿಎಸ್ ನಾಯಕ ಶರಣಪ್ಪ ಸಲಾದಪುರ ಬಲವಾಗಿ ಅಂಟಿಕೊಂಡಿದ್ದು ಸ್ವಜಾತಿ ಮತದಾರರನ್ನು. ತಾಲ್ಲೂಕಿನಲ್ಲಿ ಹೆಚ್ಚಾಗಿ ಕುರುಬ ಸಮುದಾಯವಿದ್ದು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದು ಕೂಡಾ ಕಾಗ್ರೆಸ್ ಪಕ್ಷೆಕ್ಕೆ ರಾಜಕೀಯ ತಲ್ಲಣ ಶುರವಾಗಿದೆ ಎಂಬುವುದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಅನಿಸಿಕೆ.

ಬಿಎಸ್ಸಾರ್ ಪಕ್ಷಕ್ಕೆ ಶ್ರೀರಾಮುಲು ಸಮುದಾಯದ ವಾಲ್ಮೀಕಿ ಜನಾಂಗವೇ ಅಸ್ತ್ರ. ಈಗಾಗಲೇ ರಾಜಕೀಯ ಸ್ಥಾನ ಹೊಂದಾಣಿಕೆ ಆಗುತ್ತಿದ್ದು. ಅತೃಪ್ತ ನಾಯಕರು ನಮ್ಮೆಡೆ ಬರುತ್ತಾರೆ. ಹಲವಾರು ನಾಯಕರಿಗೆ ಗಾಳ ಹಾಕಲಾಗಿದೆ ಎಂದು ಆ ಪಕ್ಷದ ಮೂಲಗಳು ತಿಳಿಸುತ್ತವೆ.

ಚಳಿಗಾಲದ ತಂಪು ಗಾಳಿಯಲ್ಲಿ ರಾಜಕೀಯ ಬಿಸಿ ಗಾಳಿ ಬೀಸಲಾರಂಭಿಸಿದೆ. ತಾಲ್ಲೂಕಿನ ರಾಜಕೀಯ ಮುಖಂಡರು ರಾಜಕೀಯ ಹೊಂದಾಣಿಕೆಯ ಸುಗ್ಗಿಯ ಕಾಲದಲ್ಲಿ ಸಮರಭ್ಯಾಸ ನಡೆಸಿದ್ದು, ಪಕ್ಷ ಹಾಗೂ ತತ್ವ ಸಿದ್ದಾಂತಕ್ಕಿಂತ ಗೆಲುವು ಮುಖ್ಯ ಎನ್ನುವ ರಾಜಕೀಯ ಲೆಕ್ಕಾಚಾರದಲ್ಲಿ  ಮುಖಂಡರು ಮುಳುಗಿದ್ದಾರೆ ಎನ್ನುವುದು ಬೆಳಕಿನಷ್ಟೆ ಸತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.