ADVERTISEMENT

ಹೊಸಹಳ್ಳಿಯ ಹಳೇ ಸಮಸ್ಯೆಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:33 IST
Last Updated 24 ಡಿಸೆಂಬರ್ 2013, 6:33 IST

ಹನುಮಸಾಗರ: ಸಮೀಪದ ಹೊಸಹಳ್ಳಿ ಗ್ರಾಮ ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದೆ. ಹತ್ತಾರು ಗ್ರಾಮಗಳು ಈ ಗ್ರಾಮದ ಕಡೆ ತಲೆ ಎತ್ತಿ ನೋಡುವಂತಹ ವಿಶಿಷ್ಟತೆಯೂ ಈ ಗ್ರಾಮದಲ್ಲಿದೆ ಹಾಗೂ ಕೆಲ ಸಮಸ್ಯೆಗಳಿಂದಲೂ ನರಳುತ್ತಿದೆ.

ಈ ಗ್ರಾಮದ ಯುವಕರು ನಾಲ್ಕಾರು ವರ್ಷ­ಗಳ ಹಿಂದೆ ಹೆಜ್ಜೆ ಕುಣಿತದಲ್ಲಿ ಹೊಸ ಶೈಲಿ ಅಳವಡಿಸಿಕೊಂಡು ಕಠಿಣ ತಾಲೀಮು ಮಾಡಿದ ಪ್ರರಿಣಾಮ ಹೆಜ್ಜೆ ಕುಣಿತ ಸದ್ಯ ರಾಜ್ಯಮಟ್ಟದವರೆಗೂ ಹೆಸರು ಇದೆ. ಅಲ್ಲದೆ ಈ ಹಳ್ಳಿಯಲ್ಲಿ ಪ್ರತಿವರ್ಷ ನಡೆ­ಯುವ ಯುಗಾದಿ ಪಾಡ್ಯ ಹಾಗೂ ಮಾರು­ತೇಶ್ವರ ಕಾರ್ತಿ­ಕೋತ್ಸವ ಅಷ್ಟೇ ವೈಶಿಷ್ಠತೆಯಿಂದ ಕೂಡಿದೆ.

ಇಂತಹ ವೈವಿಧ್ಯತೆ ಹೊಂದಿದ ಈ ಹಳ್ಳಿಯಲ್ಲಿ ಅಲೆದಾಡಿದರೆ ಹತ್ತಾರು ಸಮಸ್ಯೆಗಳು ಕಣ್ಣಿಗೆ ಗೋಚರಿಸುತ್ತವೆ. ಸ್ಥಳೀಯ ಚುನಾಯಿತ ಪ್ರತಿ­ನಿಧಿಗಳು ಹಾಗೂ ಈ ಗ್ರಾಮವನ್ನು ಪ್ರತಿನಿಧಿ­ಸುವ ಅಡವಿಭಾವಿ ಗ್ರಾಮ ಪಂಚಾಯಿತಿ ಗಮನ­ಹರಿಸದಿರುವುದೇ ಈ ಸಮಸ್ಯೆಗಳು ಪರಿಹಾರ­ವಾಗದೆ ಹಾಗೆ ಉಳಿಯಲು ಕಾರಣವಾಗಿದೆ.

ಗ್ರಾಮದಲ್ಲಿ ಚರಂಡಿ ನಿರ್ಮಿಸದಿರುವು­ದರಿಂದ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು ಜನ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.

ಇಂತಹ ರಸ್ತೆಗಳು ಕಾಣುತ್ತವೆ. ಇತ್ತೀಚೆಗೆ ಇಲ್ಲಿ ಮಲೇರಿಯಾ ಹರಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಸ್ವಂತ ಮನೆಯ ಸೂರಿನ ಕನಸು ಕಾಣುತ್ತಿ­ರುವ ಅನೇಕ ಫಲಾನುಭವಿಗಳು ಸ್ಥಳೀಯವಾಗಿ ಪಡೆದು ಬುನಾದಿವರೆಗೆ ಮನೆ ಕಟ್ಟಿಕೊಂಡಿ­ದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಯವರು ಕೇಳಿದಾಗೊಮ್ಮೆ ದಾಖಲೆಗಳನ್ನು ನೀಡಿದ್ದಾರೆ. ಆದರೆ ಇದುವರೆಗೂ ಹಣ ಮಾತ್ರ ಬಿಡುಗಡೆಯಾಗಿಲ್ಲ.

ಗ್ರಾಮದ ಬೀದಿಗಳಲ್ಲಿ ಹೆಜ್ಜೆ ಊರಲು ಸಾಧ್ಯವಿಲ್ಲದಂತೆ ಕೆಸರಿದೆ. ಸಿಸಿ ರಸ್ತೆ ಮಾಡೋದು ಬ್ಯಾಡ್ರಿ, ಹಾಸುಬಂಡಿ ಹಾಕಿ ಕೊಡ್ರಿ ಶಾಶ್ವತವಾಗಿರ್ತಾವ ಅಂತ ಹಲವಾರು ಬಾರಿ ಮನವಿ ಮಾಡಿಕೊಂಡರೂ ನಮ್ಮೂರ ರಸ್ತೆಗಳಿಗೆ ಸಿಸಿ ಬರಲಿಲ್ಲ. ಇತ್ತ ಹಾಸುಬಂಡಿನೂ ಬರಲಿಲ್ಲ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.

ಗ್ರಾಮಸ್ಥರು ದುಡಿಮೆ ಅರಸಿ ಗುಳೆ ಹೋಗು­ತ್ತಾರೆ ಬೇಗನೆ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕೊಡಿ ಎಂದು ಜನ ಕೇಳುತ್ತಿದ್ದಾರೆ. ಈ ಹಿಂದೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿನ ಕಾಮಗಾರಿಗಳು ಅರ್ಧಂಬರ್ಧಕ್ಕೆ ನಿಂತಿವೆ ಕನಿಷ್ಠ ಪಕ್ಷ ಅವುಗಳನ್ನಾದರೂ ಪೂರ್ಣಗೊಳಿಸಿ ಎಂದು ಜನ ಒತ್ತಾಯಿಸುತ್ತಾರೆ.

ಈ ಭಾಗದ ನೀರಿನಲ್ಲಿ ಫ್ಲೋರೈಡ್‌ ಅಂಶ    ಹೆ­ಚ್ಚಾ­ಗಿದ್ದೂ ತಮ್ಮೂರಿಗೆ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿ ಎಂದು ಸಾಕಷ್ಟು ಬಾರಿ ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

‘ಸಂಪೂರ್ಣಗೊಂಡಿಲ್ಲ’

ನಮ್ಮ  ಊರಾಗ ಯಾವ ಕೆಲಸಗಳೂ ಸಂಪೂರ್ಣಗೊಂಡಿಲ್ಲ, ಎಲ್ಲವೂ ಅರ್ಧಂಬರ್ಧ. ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ.
–ಪರಸಪ್ಪ ಬಲಕುಂದಿ

‘ನಿರ್ವಹಣೆ ಇಲ್ಲದ ಶೌಚಾಲಯ’
ಮಹಿಳೆಯರಿಗಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಶೌಚಾಲಯದ ಸುತ್ತಲೂ ಜಾಲಿಮುಳ್ಳು ಬೆಳೆದಿದೆ. ಊರ ಕೊಳಚೆ ಹರಿದು ಅಲ್ಲಿಯೇ ಸಂಗ್ರಹವಾಗುತ್ತದೆ. ಮಹಿಳೆಯರು ಶೌಚಕ್ಕೆ ಹೋಗಬೇಕಾದರೆ ಇದೆಲ್ಲವನ್ನು ದಾಟಿಕೊಂಡು ಹೋಗಬೇಕು.
–ಹುಲಿಗೆಮ್ಮ ಹರಿಜನ

‘ನನೆಗುದಿ ಬಿದ್ದಿದೆ’

ವಿವಿಧ ವಸತಿ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ಸಾಲ ಮಾಡಿ ಬುನಾದಿಯವರೆಗೆ ನಾವೇ ಮನೆ ನಿರ್ಮಿಸಿಕೊಂಡಿದ್ದೇವೆ. ಆದರೆ ಈವರೆಗೂ ಸಹಾಯ ಧನ ಮಂಜೂರಾಗದ ಕಾರಣ ಮನೆಗಳ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿವೆ.
–ಶರಣಪ್ಪ ಹೇರೂರ

‘ಕಳಪೆ ಕಾಮಗಾರಿ’

ಹಲವಾರು ವರ್ಷಗಳ ಹಿಂದೆ ನೀರಿನ ಮೇಲ್ತೊಟ್ಟೆ ನಿರ್ಮಿಸಲಾಗಿದೆ. ಆದರೆ ನಿರ್ಮಾಣಗೊಳಿಸಿದ ನಂತರ ಇಲ್ಲಿವರೆಗೆ ಒಂದು ಬಾರಿಯೂ ಅದನ್ನು ತೊಳೆದಿಲ್ಲ. ಕಳಪೆ ಕಾಮಗಾರಿಯಿಂದಾಗಿ ಅದೀಗ ಮುರಿದು ಬೀಳುವ ಸ್ಥಿತಿಯಲ್ಲಿದೆ.
–ಹನುಮಂತಪ್ಪ ಗುಡಲದಿನ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT