ADVERTISEMENT

‘ಜಿಲ್ಲೆ ಅಭಿವೃದ್ಧಿಗೆ ಅನುದಾನ ನೀಡಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:30 IST
Last Updated 5 ಡಿಸೆಂಬರ್ 2013, 6:30 IST

ಯಾದಗಿರಿ: ‘ಹೊಸ ಜಿಲ್ಲೆಯಾದಾಗ ಹಿಂದಿನ ಸರ್ಕಾರ ಘೋಷಿಸಿದ್ದ ರೂ. 300 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ, ಹಿಂದುಳಿದ ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ­ದಲ್ಲಿ ತಮ್ಮ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲಿಖಿತ ಉತ್ತರಕ್ಕೆ ಪ್ರತಿಕ್ರಿಯಿಸಿದ ಡಾ. ಮಾಲಕರಡ್ಡಿ, ಹಿಂದಿನ ಸರ್ಕಾರ ವಿಶೇಷ ಅನುದಾನ ಘೋಷಿಸಿದರೂ, ಪೂರ್ಣ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಆ ಅನುದಾನದ ನಿರೀಕ್ಷೆ­ಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದರು.

ಯಾದಗಿರಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ ಆಗಿರುವುದು ಸರ್ಕಾರದ ಗಮನದಲ್ಲಿದ್ದು, ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಿಂದಿನ ಸರ್ಕಾರ ರೂ. 300 ಕೋಟಿ ವಿಶೇಷ ಅನುದಾನ ಘೋಷಿಸಿರುವುದೂ ಸರ್ಕಾರದ ಗಮನ­ದಲ್ಲಿದೆ. ನೂತನ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಯೋಜನೆಯಡಿ ಈಗಾಗಲೇ ಸ್ವಲ್ಪ ಅನುದಾನ ಬಿಡುಗಡೆ ಮಾಡ­ಲಾಗಿದೆ ಎಂದು ಮುಖ್ಯಮಂತ್ರಿಗಳು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಭಿವೃದ್ಧಿ ದೃಷ್ಟಿಯಿಂದ ಹೊಸ ಜಿಲ್ಲೆ ರಚಿಸಲಾಗಿತ್ತು. ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನ ಘೋಷಿಸಲಾಗಿತ್ತು. ಆದರೂ ಪೂರ್ಣ ಹಣ ಬಿಡುಗಡೆಯಾಗದೇ ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರಗಳು ಅಭಿವೃದ್ಧಿಯಲ್ಲಿ ಹಿಂದುಳಿಯು­ವಂತಾಗಿದೆ. ರಸ್ತೆಗಳ ಅಭಿವೃದ್ಧಿ­ಯಾಗದೇ ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ವಿಶೇಷ ಅನುದಾನದ ಬಿಡುಗಡೆಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಡಾ. ಮಾಲಕರಡ್ಡಿ ಆಗ್ರಹಿಸಿದ್ದಾರೆ.

ನಗರೋತ್ಥಾನ ಯೋಜನೆಯಯಡಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಜಿಲ್ಲೆಯ 4 ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಒಟ್ಟು ರೂ. 126.29 ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲಾಗಿದೆ. 2012–-13ನೇ ಸಾಲಿನಲ್ಲಿ ಈ ಯೋಜನೆಯಡಿ ರೂ. 14.50 ಕೋಟಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನದ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ ನಂತರ ನಿಯಮಾನುಸಾರ ಮುಂದಿನ ಕಂತಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೊಸ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿ ಪ್ರಗತಿ ಕೈಗೊಳ್ಳದೇ ಹೋದರೆ ನೂತನ ಜಿಲ್ಲೆ ರಚನೆ ಮಾಡಿದ ಉದ್ದೇಶವೇ ವಿಫಲ­ವಾಗುತ್ತದೆ. ಹಾಗಾಗಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮಾಲಕರಡ್ಡಿ ಒತ್ತಾಯಿಸಿದರು.
ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಹಂತಹಂತವಾಗಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ನಿಯಮಾನುಸಾರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.