ADVERTISEMENT

‘ದೀಪದಂತೆ ಮನೆ , ಮನ ಬೆಳಗಿ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:27 IST
Last Updated 21 ಡಿಸೆಂಬರ್ 2013, 9:27 IST
ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮದ ದುರದುಂಡೇಶ್ವರ ಮಠದ ಆವರಣದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿದರು. ಮಾಜಿ ಸಚಿವ ರಾಜುಗೌಡ, ಶಿವಕುಮಾರ ದೇವರು ಇತರರು ಇದ್ದರು
ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮದ ದುರದುಂಡೇಶ್ವರ ಮಠದ ಆವರಣದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿದರು. ಮಾಜಿ ಸಚಿವ ರಾಜುಗೌಡ, ಶಿವಕುಮಾರ ದೇವರು ಇತರರು ಇದ್ದರು   

ಹುಣಸಗಿ: ವಿವಾಹ ಎಂಬುದು ಕೇವಲ ಬಂಧನವಾಗದೇ, ಸಮಾಜದ ಹಿತಕ್ಕಾಗಿ ಶ್ರಮಿಸುವ ಜೋಡಿ ನೀವಾಗಬೇಕು. ಇಂದು ನವಜೀವನಕ್ಕೆ ಕಾಲಿಟ್ಟ ಮಹಿಳೆ­ಯರು ಕಾರ್ತಿಕ ಮಾಸದ ದೀಪದಂತೆ ಮನೆ ಮತ್ತು ಮನ ಬೆಳಗಲಿ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹಾರೈಸಿದರು.

ಸಮೀಪದ ಕೊಡೇಕಲ್ಲ ಗ್ರಾಮದ ದುರುದುಂಡೇಶ್ವರ ಮಠದ ಆವರಣ­ದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಮತ್ತು ಧರ್ಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಮತ್ತು ಸನಾತನ ಹಿಂದು ಧರ್ಮಕ್ಕೆ ಅಮೂಲ್ಯ­ವಾದ ಇತಿಹಾಸವಿದೆ. ಆ ಇತಿಹಾಸ­ವನ್ನು ಕಾಪಾಡುವ ಮತ್ತು ತಿಳಿದು­ಕೊಳ್ಳುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ. ಹಿಂದು ಧರ್ಮ ವಿಶಾಲವಾದ ವೃಕ್ಷವಿದ್ದಂತೆ. ಅದರಲ್ಲಿನ ವಿವಿಧ ಪಂಗಡಗಳು ಅದರ ಟೊಂಗೆಗ­ಳಿಂದ್ದಂತೆ. ಯಾವ ಟೊಂಗೆಗೆ ತೊಂದರೆ­ಯಾದರೂ, ವೃಕ್ಷಕ್ಕೆ ಹಾನಿಯಾ­ಗುತ್ತದೆ. ಅದರಂತೆ ಎಲ್ಲರಲ್ಲಿಯೂ ನಾವೆಲ್ಲ ಒಂದೇ ಎಂಬ ಭಾವ ಬರಬೇಕು. ಅದರಿಂದ ಮಾತ್ರ ಭಾರತದ ಪ್ರಗತಿ ಸಾಧ್ಯ ಎಂದರು.

ದೇವರನ್ನು ಸಹಸ್ರಾಕ್ಷ ಎಂದು ಕರೆಯಲಾಗುತ್ತದೆ. ದೇವರ ಸ್ಮರಣೆ­ಯಿಂದ ಜೀವನ ಪಾವನವಾಗುತ್ತದೆ. ದೀನ, ದಲಿತ, ಅಶಕ್ತರಲ್ಲಿ ದೇವರನ್ನು ಕಾಣಿ. ದೇಶಭಕ್ತಿ ನಮ್ಮ ಉಸಿರಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜುಗೌಡ ಮಾತನಾಡಿ, ಸುರಪುರ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಸಾಮೂಹಿಕ ವಿವಾಹ ನಡೆಸಿದ ಕೀರ್ತಿ ಕೊಡೇಕಲ್ಲ ದುರದುಂಡೇಶ್ವರ ಮಠಕ್ಕೆ ಸಲ್ಲುತ್ತದೆ. ತಾಲ್ಲೂಕಿನಲ್ಲಿ ಇಲ್ಲಿಯ­ವರೆಗೆ ಸುಮಾರು 3,600 ಕ್ಕೂ ಹೆಚ್ಚು ಸಾಮೂಹಿಕ ವಿವಾಹ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ, ಜೀವನದಲ್ಲಿ ಎಲ್ಲರಿಗೂ ಸುಖ–ದುಃಖಗಳು ಬಂದು ಹೋಗುತ್ತವೆ. ಅವುಗಳನ್ನು ಸಮಾಧಾನ­ವಾಗಿ ಸ್ವೀಕರಿಸಿ ಮುನ್ನಡೆಬೇಕು. ಮುಂದಿನ ದಿನಗಳಲ್ಲಿ ಎಲ್ಲರೂ ತಮ್ಮ ಮನೆಯ ಹಿರಿಯರ ಸೇವೆಯನ್ನು ಮಾಡಿ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಸಿ. ಪಾಟೀಲ ಮಾತನಾಡಿ, ಇಂದು ಸಾಮೂಹಿಕ ವಿವಾಹದಲ್ಲಿ ಒಂದಾಗುತ್ತಿರುವ ಜೋಡಿಗಳು ಸಮಾಜ ಮೆಚ್ಚುವಂತೆ ಜೀವನ ನಡೆಸಿ. ದುರದುಂಡೇಶ್ವರ ಮಠದ ಒಳ್ಳೆಯ ಕಾರ್ಯಗಳಿಗೆ ನೀವೂ ಕೈಜೊಡಿಸಿ ಎಂದರು.

ಮಠದ ಶಿವಕುಮಾರ ದೇವರು, ರಾಜಾ ಜಿತೇಂದ್ರನಾಯಕ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಸಂಗಯ್ಯ ಮಹಲಿನಮಠ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸಂಗಮ್ಮ ಹಾವೇರಿ, ಯಲ್ಲಪ್ಪ ಕುರಕುಂದಿ, ವೀರಸಂಗಪ್ಪ ಹಾವೇರಿ, ಸಂಗನಗೌಡ ವಜ್ಜಲ, ಶಾಮಸುಂದರ ಜೋಶಿ, ಕನಕು ಜೀರಾಳ, ದೇವು ಗೋಪಾಳೆ, ಶರಣು ದಂಡಿನ್, ರಂಗನಾಥ ದೊರೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.

ಶಿರಸಿಯ ಮಲ್ಲಿಕಾರ್ಜುನ ಸ್ವಾಮಿಗಳು, ವಾಸುದೇವ ಶರಣರು, ಮರಿಹುಚ್ಚಯ್ಯ ಸ್ವಾಮಿಗಳು, ಚನ್ನಬಸವಸ್ವಾಮಿಗಳು, ಸೇರಿದಂತೆ ಹಲವಾರು ಮಠಾಧೀಶರು ಸಾನ್ನಿಧ್ಯ ವಹಿಸಿ ನವ ಜೋಡಿಗಳಿಗೆ ಹರಸಿದರು.

ಬೆಳಿಗ್ಗೆ ಲಿಂಗದೀಕ್ಷೆ, ಅಯ್ಯಾಚಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ­ಗಳು ನಡೆದವು. ಡಾ.ಬಿ.ಬಿ. ಬಿರಾದಾರ ಸ್ವಾಗತಿಸಿದರು.
ಭೀಮನಗೌಡ ಬಿರಾದಾರ ವಂದಿಸಿದರು. ಪ್ರಕಾಶ ಅಂಗಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.