ADVERTISEMENT

‘ರೈತರಿಗೆ ಶೇ. 3 ಬಡ್ಡಿ ದರದಲ್ಲಿ ಸಾಲ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 7:02 IST
Last Updated 24 ಸೆಪ್ಟೆಂಬರ್ 2013, 7:02 IST

ಯಾದಗಿರಿ: ರೈತರ ಕೃಷಿ ಚಟುವಟಿಕೆಗಳಿಗೆ ಶೇ.3 ರ ಬಡ್ಡಿ ದರದಲ್ಲಿ ಸಾಲ ನೀಡಲು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ರೂ. 1 ಕೋಟಿ ನಿಗದಿ ಪಡಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಂಕರರೆಡ್ಡಿ ಪಾಟೀಲ ತಿಳಿಸಿದರು.

ನಗರದಲ್ಲಿರುವ ಬ್ಯಾಂಕ್‌ನ ಆವರಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಶೇ 70 ರಷ್ಟು ಸಾಲ ವಸೂಲಾತಿ ಮಾಡಿದ್ದು, ಹೆಚ್ಚಿನ ಸಾಲ ನೀಡಲು ಬ್ಯಾಂಕ್‌ ಆರ್ಥಿಕವಾಗಿ ಸಬಲವಾಗಿದೆ ಎಂದು ತಿಳಿಸಿದರು.

10,775 ಸದಸ್ಯರನ್ನು ಹೊಂದಿರುವ ಬ್ಯಾಂಕಿನಲ್ಲಿ, 4,815 ಸಾಲಗಾರ ಸದಸ್ಯರಿದ್ದಾರೆ. ಕಳೆದ 57 ವರ್ಷಗಳಿಂದಲೂ ಬ್ಯಾಂಕ್‌, ರೈತರ ನೆರವಿಗೆ ನಿಂತಿದ್ದು, ಸಾಕಷ್ಟು ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಆರ್ಥಿಕ ಸದೃಢತೆಯನ್ನು ಹೊಂದಿದೆ. ಈಗ ಹೊಸ ಜಿಲ್ಲೆಯಾಗಿದ್ದರಿಂದ ಹೆಚ್ಚಿನ ಸಾಲ ಒದಗಿಸಲು ಹೆಚ್ಚಿನ ಆರ್ಥಿಕ ಸಹಾಯವನ್ನು ಸರ್ಕಾರದಿಂದ ಕೋರಲಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ, ಬ್ಯಾಂಕುಗಳ ಅಧಿಕಾರಿಗಳು ಸಾಲ ವಸೂಲಿಗೆ ಸಹಕಾರ ನೀಡುತ್ತಿರುವುದರಿಂದ ನಮ್ಮ ಬ್ಯಾಂಕಿನ ಸಾಲ ವಸೂಲಾತಿಯಲ್ಲಿ ಗುರಿ ಮುಟ್ಟಲು ಸಾಧ್ಯವಾಗಿದೆ. ರೈತರು ತಾವು ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಪಾವತಿಸಿ, ಸರ್ಕಾರ ಕೊಡುವ ಬಡ್ಡಿ ರಿಯಾಯಿತ ಲಾಭವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ವಿಶ್ವನಾಥರೆಡ್ಡಿ, ಮಾಜಿ ಅಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್, ಜಗನ್ನಾಥರೆಡ್ಡಿ ವಂಕಸಂಬ್ರ, ಪ್ರಕಾಶರೆಡ್ಡಿ, ಚೆನ್ನಮ್ಮ ಮಾಳಿಕೇರಿ, ಮಲ್ಲಮ್ಮ ಬಾಗಲಿ, ಸೂರ್ಯಕಾಂತ ಆಕಳ ಸೇರಿದಂತೆ ಇತರರು ಭಾಗವಹಿಸಿದ್ದರು. ಬ್ಯಾಂಕ್‌ನ ವ್ಯವಸ್ಥಾಪಕ ಮಹಾದೇವಪ್ಪ ಕಂದಕೂರು ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.