ADVERTISEMENT

2,272 ಮನೆ, 4,400 ಹೆಕ್ಟೇರ್‌ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:22 IST
Last Updated 20 ಸೆಪ್ಟೆಂಬರ್ 2013, 8:22 IST

ಯಾದಗಿರಿ-: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಆಸ್ತಿ, ಬೆಳೆ ಹಾನಿಯಾಗಿದೆ. 2,272 ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ 24 ಮನೆಗಳು ಸಂಪೂರ್ಣ ಕುಸಿದಿವೆ.

ಕಂದಾಯ ಇಲಾಖೆ ನಡೆಸಿದ ಪ್ರಾಥಮಿಕ ಸಮೀಕ್ಷೆಯ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 4,400 ಎಕರೆ ಬೆಳೆ ಹಾನಿಯಾಗಿದೆ. ಮಳೆ ನೀರು ತುಂಬಿ ಬೆಳೆ ನಷ್ಟವಾಗಿದೆ. ಒಟ್ಟು 2,272 ಮನೆಗಳಿಗೆ ಹಾನಿಯಾಗಿದ್ದು, 1705 ಕಚ್ಚಾ ಮನೆಗಳು ಹಾಗೂ 51 ಮನೆಗಳಿಗೆ ಭಾಗಶಃ ಹಾನಿ­ಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯಿಂದ ಹಾನಿಗೆ ಒಳಗಾದವರಿಗೆ ಪರಿಹಾರ ನೀಡಲು ಅನುದಾನಕ್ಕಾಗಿ  ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ತುರ್ತು ಪರಿಹಾರಕ್ಕಾಗಿ ಜಿಲ್ಲಾಡಳಿತದಿಂದ ರೂ. 1 ಕೋಟಿ ಬೀಡುಗಡೆ ಮಾಡಲಾಗಿದೆ.

ಸರ್ಕಾರಿ ಹಾಗೂ ಖಾಸಗಿ ಆಸ್ತಿ ಪಾಸ್ತಿ ನಷ್ಟದ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿ, ಅಂತಿಮ ವರದಿ ನೀಡುವಂತೆ ಎಲ್ಲ ತಹಶಿೀಲ್ದಾರ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ತಿಳಿಸಿದ್ದಾರೆ.

ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಮಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ರಸ್ತೆ ಹಾಳಾಗಿರುವುದರಿಂದ ಆಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸೆ.16ರವರೆಗೆ ವಾಡಿಕೆ ಪ್ರಕಾರ 682 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈವರೆಗೆ 574 ಮಿ.ಮೀ. ಮಳೆಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 280 ಕೆರೆ ಹಾಗೂ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಬರುವ 66 ಕೆರೆಗಳಿವೆ. ಅವುಗಳಲ್ಲಿ ಸದ್ಯ 77 ಕೆರೆಗಳು ಭರ್ತಿಯಾಗಿವೆ. ಕಳೆದ ನಾಲ್ಕು ದಿನ ನಿತ್ಯ ಸರಾಸರಿ 100 ಮಿ.ಮೀ. ಮಳೆಯಾಗಿದ್ದು, 7 ಕುರಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಜಮಾದಾರ ತಿಳಿಸಿದ್ದಾರೆ.

ಸಮಗ್ರ ಸಮೀಕ್ಷೆ ನಡೆಸಲು ಆಗ್ರಹ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ನೀರು ನಿಂತು ಹಾಗೂ ನೀರಿನಿಂದ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನೂರಾರು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಜಿಲ್ಲಾ ರಸ್ತೆಗಳು ಮತ್ತು ವಿವಿಧ ಗ್ರಾಮೀಣ ರಸ್ತೆಗಳು ಹಾಳಾಗಿರುವ ಕುರಿತು ವರದಿಯಿದ್ದು, ಜಿಲ್ಲಾಡಳಿತವು ಆಗಿರುವ ಹಾನಿಯ ಕುರಿತು ಸಮಗ್ರವಾದ ಸಮೀಕ್ಷೆಯನ್ನು ನಡೆಸಬೇಕು. ಹಾನಿಗೊಳಗಾದ ಜನರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯ (ಕಮ್ಯೂನಿಸ್ಟ್‌) ಯಾದಗಿರಿ ಸಂಘಟನಾ ಸಮಿತಿ ಒತ್ತಾಯಿಸಿದೆ.

ಈ ವರ್ಷದ ಆರಂಭದಲ್ಲಿ ಸರಿಯಾದ ಸಮಯಕ್ಕೆ ಮಳೆ ಬರದಿರುವುದರಿಂದ ಬಿತ್ತನೆ ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಜನ­ಸಾಮಾನ್ಯರ ಮತ್ತು ರೈತರ ಜೀವನೋಪಾಯ ಮತ್ತು ಆದಾಯಕ್ಕೆ ಪೆಟ್ಟು ಬಿದ್ದಿದೆ. ಇರುವ ಅಲ್ಪ ಸ್ವಲ್ಪ ಬೆಳೆಗಳೂ ಅತಿವೃಷ್ಟಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಗಾಯದ ಮೆಲೆ ಬರೆ ಎಳೆದಂತಾಗಿದೆ. ಇಷ್ಟೇ ಅಲ್ಲದೆ ನೂರಾರು ಮನೆಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದ್ದು, ಜನರಿಗೆ ದಿಕ್ಕು ತೋಚದಂತಾಗಿದೆ. ಗ್ರಾಮೀಣ ರಸ್ತೆಗಳು, ಕೆರೆ-ಕಟ್ಟೆಗಳು ಕೊಚ್ಚಿ ಹೋಗಿದ್ದು, ಸಾರಿಗೆ ಮತ್ತು ಸಂಚಾರಕ್ಕೆ ತೊಡಕುಂಟಾಗಿದೆ. 

ಜಿಲ್ಲಾಡಳಿತವು ಜನರಿಗೆ ಬೇಕಾಗಿರುವ ತುರ್ತು ನೆರವಿನ ಅಗತ್ಯವನ್ನು ಅರಿತು, ವಿವಿಧ ರೀತಿಯ ಹಾನಿಯ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ಸರಿಯಾದ ಸಮೀಕ್ಷೆ ನಡೆಸಬೇಕು. ಹಾನಿಯನ್ನು ಸರಿಯಾಗಿ ಅಂದಾಜಿಸಿ, ಹಾನಿಗೊಳಗದವರಿಗೆ ತಕ್ಷಣವೇ ಪರಿಹಾರವನ್ನು ವಿತರಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನಗರ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ತೀವ್ರ ಪರಿಣಾಮ ಉಂಟಾಗಿದ್ದು, ರೋಗ-ರುಜಿನಗಳು ಹರಡುವ ಸಾಧ್ಯತೆಗಳಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ಔಷಧಿಗಳು ಸಹಿತ  ವೈದ್ಯರ ನೆರವು ದಿನದ 24 ಗಂಟೆಯೂ ಎಲ್ಲೆಡೆ ದೊರೆಯುವಂತೆ ಮಾಡಬೇಕು ಎಂದು ಸಮಿತಿ ಸಂಚಾಲಕ ಕೆ.ಸೋಮಶೇಖರ್ ಒತ್ತಾಯಿಸಿದ್ದಾರೆ.
ಹತ್ತಿಗುಡೂರ– ನಂದಳ್ಳಿ(ಜೆ): ರಸ್ತೆ ಸಂಪರ್ಕ ಕಡಿತ

ಶಹಾಪುರ: ತಾಲ್ಲೂಕಿನ ಹತ್ತಿಗುಡೂರ– ನಂದಳ್ಳಿ(ಜೆ) ಗ್ರಾಮದ ಮಾರ್ಗ ಮಧ್ಯಹಳ್ಳಕ್ಕೆ ನಿರ್ಮಿಸಲಾದ  ಸೇತುವೆ ಪಕ್ಕದಲ್ಲಿ  ಅಧಿಕ ಮಳೆಯ ನೀರು ನುಗ್ಗಿದ್ದರಿಂದ  ತಗ್ಗು ಪ್ರದೇಶ ಕೊಚ್ಚಿಕೊಂಡು ಹೋಗಿದೆ. ಇದರಿಂದ   ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದೆ.  ತಾಲ್ಲೂಕಿನ ಕೇಂದ್ರಕ್ಕೆ ಬರಬೇಕಾದರೆ  ಬಿರನೂರ ಗ್ರಾಮದ ಕ್ರಾಸ್‌ ಮೂಲಕ 18 ಕಿ.ಮೀ ಸುತ್ತುವರೆದು ಬರುವ  ಸ್ಥಿತಿ ಎದುರಾಗಿದೆ.

ಎತ್ತರದಲ್ಲಿ ಸೇತುವೆ ನಿರ್ಮಿಸಿ ಅದರ ಪಕ್ಕದಲ್ಲಿನ ಹಳ್ಳದ ಹತ್ತಿರ ತಗ್ಗು ಮಾಡಿದ್ದರಿಂದ ಅಧಿಕ ನೀರು ಸಂಗ್ರಹವಾಗಿ ರಸ್ತೆ ಕೊಚ್ಚಿಕೊಂಡು ಹೋಗಿದೆ. ಸೇತುವೆ ನಿರ್ಮಿಸಿದ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ನಾವು ತೊಂದರೆ ಅನುಭವಿಸುಂತಾಗಿದೆ.
ಶಾಲಾ ಮಕ್ಕಳು, ಮಹಿಳೆಯರಿಗೆ ಸಂಚರಿಸಲು ತೊಂದರೆಯಾಗಿದೆ. ಯಾವೊಬ್ಬ ಅಧಿಕಾರಿಯು ಗ್ರಾಮಕ್ಕೆ ಬರಲಿಲ್ಲ ಎಂದು ಗ್ರಾಮದ ಮುಖಂಡರಾದ ಮಲ್ಲಣ್ಣಗೌಡ ಹಾಗೂ ಬಂಡೇಗುರುಸ್ವಾಮಿ ಆರೋಪಿಸಿದ್ದಾರೆ.

ಸಂಪರ್ಕ ಕಡಿತದಿಂದ ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಜಾನುವಾರುಗಳನ್ನು ತೆಗೆದುಕೊಂಡು ಹೋಗಲು ಹಿಂದೇಟು ಹಾಕುವಂತಾಗಿದೆ. ತ್ವರಿತವಾಗಿ ಗ್ರಾಮದ ರಸ್ತೆ ಸಂಪರ್ಕವನ್ನು ಕಲ್ಪಿಸಬೇಕೆಂದು ಗ್ರಾಮದ ಮುಖಂಡರಾದ ನಿಂಗಯ್ಯ ನಾಯ್ಕೋಡಿ, ರಾಮಚಂದ್ರಪ್ಪ ದೊರೆ, ವೆಂಕೋಬ, ದೇವಪ್ಪ, ಬಸವಂತ, ನಿಂಗಯ್ಯ  ಹುಸೇನಸಾಬ್‌ ರಂಗಪ್ಪ ಮತ್ತಿತರರು ತಾಲ್ಲೂಕು ದಂಡಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.