ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 2,859 ಏಡ್ಸ್‌ ರೋಗಿಗಳು

ಲಾಕ್‌ಡೌನ್‌ ವೇಳೆ ನಡೆಯದ ಶಿಬಿರ ಪರೀಕ್ಷೆ; ಈ ಬಾರಿ ಜಾಗೃತಿ ಸಭೆಯೂ ಕಡಿಮೆ

ಬಿ.ಜಿ.ಪ್ರವೀಣಕುಮಾರ
Published 29 ನವೆಂಬರ್ 2020, 19:30 IST
Last Updated 29 ನವೆಂಬರ್ 2020, 19:30 IST
ಯಾದಗಿರಿಯ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ
ಯಾದಗಿರಿಯ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ   

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ 4,469 ಎಚ್‌ಐವಿ ಪೀಡಿತರು ಪತ್ತೆಯಾಗಿದ್ದು, ಸದ್ಯ 2,859 ಜನ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆ ಪಡೆಯುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಎಚ್‌ಐವಿ ಪೀಡಿತರ ಸಂಖ್ಯೆ ಇಳಿಕೆಯಾಗಿದ್ದು, ಪಾಸಿಟಿವಿಟಿಯಲ್ಲಿಯೂ ಶೇಕಡವಾರು ಕಡಿಮೆಯಾಗಿದೆ.

2010–11ರಲ್ಲಿ 12,524 ಸಾಮಾನ್ಯ ಜನರಿಗೆ ಪರೀಕ್ಷೆ ಮಾಡಲಾಗಿದೆ. 2011–12ರಲ್ಲಿ 19,638, 2012–13ರಲ್ಲಿ 20, 738, 2013–14ರಲ್ಲಿ 26,167, 2014–15ರಲ್ಲಿ 30, 869 ಜನ ಸೇರಿದಂತೆ 2020–21ರ ತನಕ 2,89,494 ಮಂದಿಗೆ ಪರೀಕ್ಷೆ ಕೈಗೊಳ್ಳಲಾಗಿದೆ.

ADVERTISEMENT

2010ರಿಂದ 2020 ರವರೆಗೆ 3,33,808 ಗರ್ಭಿಣಿಯರ ಪ್ರಸವ ಪೂರ್ವ ಪರೀಕ್ಷೆ (ಎಎನ್‌ಸಿ) ಪರೀಕ್ಷೆ ಮಾಡಲಾಗಿ 271 ಜನರಿಗೆ ಎಚ್‌ಐವಿ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ನಿರಂತರ ಜಾಗೃತಿ, ಸಭೆ, ಸಮಾರಂಭಗಳು ನಡೆಯುತ್ತಿವೆ. ಈ ವರ್ಷ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಹೆಚ್ಚಿನ ಕಾರ್ಯಕ್ರಮಗಳು ಹಮ್ಮಿಕೊಂಡಿಲ್ಲ. ಅಲ್ಲದೆ ಕೆಲ ವರ್ಗಗಳನ್ನು ಗುರಿಯಾಗಿಸಿ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಈ ಬಾರಿ ಅದೂ ಕೂಡ ಸಾಧ್ಯವಾಗಿಲ್ಲ. ಇದರಿಂದಾಗಿಯೂ ಪಾಸಿಟಿವಿಟಿ ಕಡಿಮೆ ಪ್ರಮಾಣದಲ್ಲಿ ಕಂಡು ಬಂದಿದೆ.

ಏಪ್ರಿಲ್ -2010 ರಿಂದ ಅಕ್ಟೋಬರ್ 2020ರವರೆಗೆ 285 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 17 ಮಕ್ಕಳಿಗೆ ಎಚ್ಐವಿ ಪತ್ತೆಯಾಗಿದೆ. 18 ತಿಂಗಳು ಕಾಲ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಡಿಸೆಂಬರ್ 1ರಂದು ವಿಶ್ವ ಏಡ್ಸ್‌ ದಿನಾಚರಣೆ ಆಚರಿಸುತ್ತಿದ್ದು, 2020ರ ಘೋಷಣೆ ‘ಎಚ್‌ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ’ಯಾಗಿದೆ.

ಸೋಂಕಿತರಿಗೆ ಸೌಲಭ್ಯ ನೀಡಿರುವ ವಿವರ

ಸರ್ಕಾರದಿಂದ ಎಚ್‌ಐವಿ ಸೋಂಕಿತರಿಗೆ ವಿವಿಧ ಯೋಜನೆಗಳ ಸೌಲಭ್ಯ ಕಲ್ಪಿಸಲಾಗಿದೆ. ಧನಶ್ರೀ ಯೋಜನೆ ಅಡಿಯಲ್ಲಿ 86 ಎಚ್‌ಐವಿ ಸೋಂಕಿತರಿಗೆ ಸಾಲ ಸೌಲಭ್ಯ ನೀಡಲಾಗಿದೆ. 22 ಎಚ್‌ಐವಿ ಸೋಂಕಿತರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಲಾಗಿದೆ.

ಎಚ್‌ಐವಿ ಸೋಂಕಿತರ ಮಕ್ಕಳಿಗೆ ಮತ್ತು ಎಚ್‌ಐವಿ ಸೋಂಕಿತ ಮಕ್ಕಳಿಗೆ ಓವಿಸಿ (ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ) ಯೋಜನೆ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ₹1,000 ರಂತೆ 18 ವರ್ಷದವರೆಗೆ ನೀಡಲಾಗುತ್ತಿದೆ. 389 ಮಕ್ಕಳಿಗೆ ನೀಡಲಾಗುತ್ತಿದೆ.

358 ಎಚ್‌ಐವಿ ಸೋಂಕಿತರಿಗೆ ಉಳಿತಾಯ ಬ್ಯಾಂಕ್‌ ಖಾತೆ ಸೌಲಭ್ಯ ಒದಗಿಸಲಾಗಿದೆ. 15 ಎಚ್‌ಐವಿ ಸೋಂಕಿತರಿಗೆ ಪ್ಯಾನ್ ಕಾರ್ಡ್‌, 68 ಎಚ್‌ಐವಿ ಸೋಂಕಿತರ ಮರಣ ಪ್ರಮಾಣ ಪತ್ರ ಅವರ ಕುಟುಂಬಗಳಿಗೆ ಒದಗಿಸಲಾಗಿದೆ. 30 ಎಚ್‌ಐವಿ ಸೋಂಕಿತರಿಗೆ ಆಧಾರ್‌ ಕಾರ್ಡ್‌ ಮಾಡಿಸಿಕೊಡಲಾಗಿದೆ. 151 ಎಚ್‌ಐವಿ ಸೋಂಕಿತರ ಮಕ್ಕಳಿಗೆ ಶಾಲಾ ಪ್ರಮಾಣ ಪತ್ರ ನೀಡಲಾಗಿದೆ. 86 ಎಚ್‌ಐವಿ ಸೋಂಕಿತರಿಗೆ ಬೇಬಾಕಿ ಪ್ರಮಾಣ ಪತ್ರ, ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ 51 ರೇಷನ್ ಕಾರ್ಡ್‌ ಒದಗಿಸಿಕೊಡಲಾಗಿದೆ.

* ಬೇರೆ ಜಿಲ್ಲೆಗಳಿಂತ ಎಚ್‌ಐವಿ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದೆ. ಈ ಬಾರಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನೂ ಕೋವಿಡ್‌ ಟೆಸ್ಟ್‌ಗಾಗಿ ನೇಮಿಸಿಕೊಂಡಿದ್ದರಿಂದ ಪರೀಕ್ಷೆ ಕಡಿಮೆಯಾಗಿವೆ.
-ಡಾ.ಇಂದುಮತಿ ಕಾಮಶೆಟ್ಟಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

* ಕಳೆದ ಬಾರಿ ಶಿಬಿರ ಮಾಡಿ ಪರೀಕ್ಷೆ ಮಾಡಲಾಗಿತ್ತು. ಈ ಬಾರಿ ಕೋವಿಡ್‌ ಕಾರಣದಿಂದ ಮಾಡಲು ಆಗಿಲ್ಲ. ಆದರೂ ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ.
- ಡಾ. ಲಕ್ಷ್ಮೀಕಾಂತ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ

* ಲಾಕ್‌ಡೌನ್‌ ವೇಳೆ ಎಆರ್‌ಟಿ ಚಿಕಿತ್ಸೆಗೆ ಎರಡು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಒಂದೇ ಬಾರಿ ನೀಡಲಾಗಿದೆ. ಮೊದಲೆಲ್ಲ ಒಂದು ತಿಂಗಳಿಗೆ ಸಾಕಾಗುವಷ್ಟು ವಿತರಿಸಲಾಗುತ್ತಿತ್ತು.
- ಅಂಬರೀಶ ಎಚ್ ಭೂತಿ, ಆಡಳಿತ ಸಹಾಯಕ, ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.