ADVERTISEMENT

ಯಾದಗಿರಿ ಜಿಲ್ಲೆಗೆ 3 ಎನ್‌ಡಿಆರ್‌ಎಫ್‌ ತಂಡ ಆಗಮನ

ಪ್ರವಾಹ ಮುನ್ಸೂಚನೆ: ಕಾರ್ಯಾಚರಣೆ ಪರೀಕ್ಷೆ ನಡೆಸಿದ ತಂಡ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:10 IST
Last Updated 18 ಅಕ್ಟೋಬರ್ 2020, 16:10 IST
ಯಾದಗಿರಿ ಸಮೀಪದ ನಾಯ್ಕಲ್ ಬಳಿಯ ಹಳ್ಳದ ದಡದಲ್ಲಿದ್ದ ಜನರನ್ನು ಬೋಟ್ ಮೂಲಕ ಸುರಕ್ಷಿತವಾಗಿ ದಡಕ್ಕೆ ತಲುಪಿಸಲಾಯಿತು
ಯಾದಗಿರಿ ಸಮೀಪದ ನಾಯ್ಕಲ್ ಬಳಿಯ ಹಳ್ಳದ ದಡದಲ್ಲಿದ್ದ ಜನರನ್ನು ಬೋಟ್ ಮೂಲಕ ಸುರಕ್ಷಿತವಾಗಿ ದಡಕ್ಕೆ ತಲುಪಿಸಲಾಯಿತು   

ಯಾದಗಿರಿ: ಭೀಮಾ ನದಿಗೆ 8 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ ಮಾಡುವ ಮುನ್ಸೂಚನೆಯಿಂದ ಮೂರು ಎನ್‌ಡಿಆರ್‌ಎಫ್‌ ತಂಡಗಳು ಜಿಲ್ಲೆಗೆ ಆಗಮಿಸಿವೆ. ಸದ್ಯ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ 3.34 ಲಕ್ಷ ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿಸಲಾಗುತ್ತಿದೆ.

ಸಿಕಂದರಾಬಾದ್‌ನಿಂದ 70 ಜನರ ತಂಡ ಬಂದಿದೆ. ಯಾದಗಿರಿ, ಶಹಾಪುರ, ವಡಗೇರಾ ತಾಲ್ಲೂಕಿಗೆ ತಲಾ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ. ಹೆಚ್ಚಿನ ನೀರು ಬಂದರೆ ಭೀಮಾ ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎನ್‌ಡಿಆರ್‌ಎಫ್‌ ತಂಡಗಳು ಆಗಮಿಸಿವೆ.

ನದಿ ತೀರದ 14 ಗ್ರಾಮಸ್ಥರನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಿದ್ದು, ಇನ್ನೂ ಸ್ಥಳಾಂತರ ಮಾಡುವ ಕಾರ್ಯ ಮುಂದುವರೆಸಿದ್ದಾರೆ. ಗ್ರಾಮಗಳ ಜನರ ರಕ್ಷಣೆ ಹಾಗೂ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವುದು ತಂಡದ ಪ್ರಮುಖ ಕಾರ್ಯವಾಗಿದೆ.

ತಂಡ ನಾಯ್ಕಲ್ ಗ್ರಾಮ ಹಾಗೂ ಭೀಮಾ ನದಿ ತೀರಕ್ಕೆ ತೆರಳಿ ಪ್ರವಾಹ ಪರಿಸ್ಥಿತಿ ಎದುರಿಸುವ ಕಾರ್ಯಾಚರಣೆಗೆ ಸ್ಥಳ ಪರಿಶೀಲನೆ ಮಾಡಿತು.ನಾಯ್ಕಲ್ ಗ್ರಾಮದ ಬಳಿಯ ನಾಯ್ಕಲ್ – ಚಟ್ನಳ್ಳಿ ಸೇತುವೆ ಭೀಮಾ ಪ್ರವಾಹದಿಂದ ತುಂಬಿ ಹರಿಯುವುದನ್ನು ವೀಕ್ಷಿಸಿದರು.

ADVERTISEMENT

ಹಳ್ಳದ ಸೇತುವೆ ಬಳಿ ಕಟಗಿ ಶಹಾಪುರದ ಸುಮಾರು 15 ಜನರು ಹಾಗೂ ನಾಲ್ವಡಿಗಿ ಗ್ರಾಮದ ಇಬ್ಬರನ್ನು ಬೋಟ್‍ನಲ್ಲಿ ನಾಯ್ಕಲ್ ಕಡೆ ಹಳ್ಳದ ದಡಕ್ಕೆ ಸುರಕ್ಷಿತವಾಗಿ ತಲುಪಿಸಿದರು.

ಹಳ್ಳಕ್ಕೆ ಭೀಮಾ ಪ್ರವಾಹ ಇಳಿಮುಖವಾಗಿದೆ ಎಂದು ತಿಳಿದು ಚಟ್ನಳ್ಳಿ, ನಾಯ್ಕಲ್ ಮೂಲಕ ಯಾದಗಿರಿಗೆ ಭಾನುವಾರ ಬೆಳಿಗ್ಗೆ ಹೊರಟಿದ್ದರು. ಅದೇ ಸಮಯಕ್ಕೆ ಸೇನಾ ಪಡೆ ಪ್ರವಾಹ ಪೀಡಿತ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಇವರು ಹಳ್ಳದ ದಡದಲ್ಲಿ ಕಾಣಿಸಿದ್ದರು. ಸೇನಾ ಪಡೆ ಅವರನ್ನು ಹಳ್ಳದ ದಡಕ್ಕೆ ತಂದು ಬಿಟ್ಟರು.

ಹೆಚ್ಚಾಗುತ್ತಿರುವ ಹೊರ ಹರಿವು
ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ರಿಜ್‌ ಕಂ ಬ್ಯಾರೇಜ್‌ಗೆ ಭಾನುವಾರ ಬೆಳಿಗ್ಗೆ 6 ಗಂಟೆಗೆ3.10 ಲಕ್ಷ ಕ್ಯುಸೆಕ್‌ ಒಳಹರಿವಿದ್ದರೆ ಅಷ್ಟೇ ಪ್ರಮಾಣದ ನೀರನ್ನು ಭೀಮಾನದಿಗೆ ಹರಿಸಲಾಗುತ್ತಿದೆ. ಸಮಯ ಕಳೆದಂತೆ ಪ್ರವಾಹದ ನೀರು ಹೆಚ್ಚಳವಾಗುತ್ತಿದ್ದು,ಕ್ರಮೇಣ ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಂಜೆ 6 ಗಂಟೆಗೆ 3.34 ಲಕ್ಷ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.2.84 ಟಿಎಂಸಿ ಸಾಮರ್ಥ್ಯ ಹೊಂದಿದ ಸನ್ನತಿ ಬ್ಯಾರೇಜ್‌ನಲ್ಲಿ 1.2 ಟಿಎಂಸಿ ನೀರು ಭರ್ತಿಯಾಗಿದೆ. ಪ್ರಸ್ತುತ ನೀರಿನ ಮಟ್ಟ 373.65 ಮೀ ಇದ್ದು, 31 ಗೇಟ್‌ಗಳಿಂದ ನೀರು ಹರಿಸಲಾಗುತ್ತಿದೆ.

***

ಒಂದೊಂದು ತಂಡದಲ್ಲಿ 22 ಸಿಬ್ಬಂದಿ ಇರಲಿದ್ದು, ‍ಪ್ರವಾಹ ಪೀಡಿತ ಮೂರು ತಾಲ್ಲೂಕುಗಳಿಗೆ ತಲಾ ಒಂದೊಂದು ತಂಡ ನಿಯೋಜಿಸಲಾಗಿದೆ.
-ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.