ADVERTISEMENT

ತಾಲ್ಲೂಕಿಗೆ 10 ತೊಗರಿ ಖರೀದಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 6:46 IST
Last Updated 5 ಜನವರಿ 2018, 6:46 IST

ಹುಣಸಗಿ: ಪಟ್ಟಣ ಸೇರಿದಂತೆ ಸುರಪುರ, ಕೊಡೇಕಲ್ಲ, ಕಕ್ಕೇರಾ ಸೇರಿದಂತೆ ಇತರ ಮುಖ್ಯ 10 ಗ್ರಾಮಗಳಲ್ಲಿ ತೊಗರಿ ಖರೀದಿ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಆಯಾ ಭಾಗದ ರೈತರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ಹುಣಸಗಿ ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಗುರುವಾರ ತೊಗರಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವರ್ಷ ಆರಂಭಿಸಲಾಗಿದ್ದ ತೊಗರಿ ಖರೀದಿ ಕೇಂದ್ರದಲ್ಲಿ ಅನೇಕ ಗೊಂದಲಗಳಿಂದಾಗಿ ರೈತರು ತೊಗರಿ ಮಾರಾಟಕ್ಕಾಗಿ ತೊಂದರೆ ಅನುಭವಿಸಿದ್ದರು. ಆದರೆ, ಈ ಬಾರಿ ಎಲ್ಲ ಗೊಂದಲಗಳನ್ನು ನಿವಾರಿಸಿದ್ದು ಹಲವಾರು ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ತೊಗರಿ ಮಾರುಕಟ್ಟೆ ಫೇಡರೇಷನ್ ವತಿಯಿಂದ ಗುಣಮಟ್ಟದ ತೊಗರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಹಾಗೂ ಬೋನಸ್ ಒಳಗೊಂಡಂತೆ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ADVERTISEMENT

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ ಮಾತನಾಡಿ, ಪ್ರತಿ ರೈತರು 20 ಕ್ವಿಂಟಲ್ ವರೆಗೆ ಮಾತ್ರ ತೊಗರಿ ಮಾರಾಟ ಮಾಡಬಹುದಾಗಿದೆ. ಅಲ್ಲದೇ ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್‌ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ, ಬೆಳೆ ನಮೂದಿಸಿರುವ ಪಹಣಿ ಪ್ರತಿ ತರಬೇಕು ಎಂದು ತಿಳಿಸಿದರು.

ಅಲ್ಲದೇ ರೈತರು ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಖರೀದಿ ಕೇಂದ್ರದ ವ್ಯವಸ್ಥಾಪಕರು ಪ್ರತಿ ದಿನ ಖರೀದಿಸಿದ ತೊಗರಿಯ ವಿವರ ಅಂಕಿ ಸಂಖ್ಯೆಯನ್ನು ನೋಡೆಲ್‌ ಅಧಿಕಾರಿಗಳಿಗೆ ಸಲ್ಲಿಸಬೇಕಿದೆ ಎಂದು ವಿವರಿಸಿದರು.

ಎಪಿಎಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಸದಸ್ಯರಾದ ನಾಗಣ್ಣ ದಂಡಿನ್, ಮಲ್ಲಣ್ಣ ಸಾಹು, ಅಪ್ಪಾಸಾಹೇಬ ಪಾಟೀಲ, ಸಂಗನಗೌಡ ಕೊಣ್ಣೂರ, ಮುಖಂಡರಾದ ಚನ್ನಯ್ಯ ಸ್ವಾಮಿ ಹಿರೇಮಠ, ಸಿದ್ದಣ್ಣ ಮಲಗಲದಿನ್ನಿ, ಎನ್.ಎಂ.ಬಳಿ, ಸುರೇಶ ದೊರಿ, ಬಸವರಾಜ ಸಜ್ಜನ್, ಸೋಮಶೇಖರ ಸ್ಥಾವರಮಠ, ಪಿಕೆಪಿಎಸ್ ಅಧ್ಯಕ್ಷ ವಿರುಪಾಕ್ಷಯ್ಯ ಸ್ಥಾವರಮಠ, ಎಂ.ಎಸ್.ಚಂದಾ ಇದ್ದರು. ಎಪಿಎಂಸಿ ಕಾರ್ಯದರ್ಶಿ ಅನ್ಸಾರಿ ಪಟೇಲ ಸ್ವಾಗತಿಸಿದರು. ಬಸವರಾಜ ಬಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.