ADVERTISEMENT

ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 7:11 IST
Last Updated 19 ಜನವರಿ 2018, 7:11 IST
ಸುರಪುರದ ಗಾಂಧಿವೃತ್ತದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕ ಘಟಕದ ವತಿಯಿಂದ ಪ್ರತಿಭಟನೆ ಜರುಗಿತು
ಸುರಪುರದ ಗಾಂಧಿವೃತ್ತದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕ ಘಟಕದ ವತಿಯಿಂದ ಪ್ರತಿಭಟನೆ ಜರುಗಿತು   

ಯಾದಗಿರಿ: ನೂತನ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಕಶೆಟ್ಟಿ ಮಾತನಾಡಿ,‘ರಾಜ್ಯ ಸರ್ಕಾರ 2006 ರ ನಂತರ ಸರ್ಕಾರಿ ಹುದ್ದಗೆ ಸೇರಿದ ನೌಕರರಿರ ನೂತನ ಪಿಂಚಣಿ ಯೋಜನೆ ಕಡ್ಡಾಯಗೊಳಿಸಿರುವ ಯೋಜನೆಯಲ್ಲಿ ಹಲವು ನ್ಯೂನತೆಗಳಿದ್ದು, ಈ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ’ ಎಂದು ಆರೋಪಿಸಿದರು.

‘ನೂತನ ಪಿಂಚಣಿ ವ್ಯವಸ್ಥೆಯಿಂದ 2006ರ ನಂತರ ನೇಮಕಗೊಂಡ ಸುಮಾರು 1.80 ಲಕ್ಷ ನೌಕರರಿಗೆ ಸಾಮಾಜಿಕ ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಆರ್ಥಿಕ ಕಾರ್ಯನಿರ್ವಹಣೆಯಲ್ಲಿ ಬದ್ಧತೆ ಇಲ್ಲವಾಗಿದೆ. ಇದು ಅನಿಶ್ಚಿತ ಪಿಂಚಣಿ ಯೋಜನೆಯಾಗಿದ್ದು, ನೂತನ ಪಿಂಚಣೆ ಪದ್ಧತಿಗೆ ಒಳಪಡುವ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಇತರೆ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ’ ಎಂದರು.

ADVERTISEMENT

‘33 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೂ ಕಡಿಮೆ ಪಿಂಚಣಿ ನಿಗದಿಪಡಿಸಲಾಗಿದೆ. ಪಿಂಚಣಿಗಾಗಿ ವೇತನದಲ್ಲಿ ಶೇ 10ರಷ್ಟು ಕಡಿತ ಮಾಡಲಾಗುತ್ತಿದೆ. ಅದನ್ನು ಷೇರು ಮಾರುಕಟ್ಟೆಯಲ್ಲೂ ತೊಡಗಿಸಲಾಗುತ್ತಿದೆ. ಕುಟುಂಬ ಪಿಂಚಣಿ, ನಿವೃತ್ತರಿಗೆ ಕಾಲಕಾಲಕ್ಕೆ ತುಟ್ಟಿಭತ್ಯೆ ಹೆಚ್ಚಳ ಆಗುವುದಿಲ್ಲ. ಕಾರಣ ನೌಕರರ ಹಕ್ಕು ಬಾಧ್ಯತೆಗಳ ರಕ್ಷಣೆಗಾಗಿ ಸಂಘ ನಿರಂತರವಾಗಿ ಹೋರಾಡುತ್ತಾ ಬಂದಿದೆ’ ಎಂದರು.

‘ಸರ್ಕಾರವು ನೌಕರರ ಹಿತರಕ್ಷಣೆಗೆ ಮುಂದಾಗಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಗತ್ಯ ಶಿಫಾರಸು ಮಾಡಬೇಕು. ಈ ಯೋಜನೆ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ಹಳೆ ಪದ್ಧತಿಯನ್ನೇ ಅಳವಡಿಸಿಕೊಳ್ಳಲು ಅಗತ್ಯ ಶಿಫಾರಸು ಮಾಡುವಂತೆ ಕರ್ನಾಟಕ ರಾಜ್ಯ 6ನೇ ವೇತನ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿ ಅನುಕೂಲ ಕಲ್ಪಿಸುವ ಮೂಲಕ ಸರ್ಕಾರಿ ನೌಕರರರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಪರಮರೆಡ್ಡಿ ಕಂದಕೂರ, ಸಿದ್ದರಾಮಪ್ಪ ದುಪ್ಪಲಿ, ಬಸವರಾಜ ಚರೋಟಗಿ, ಶರಣಗೌಡ ಆಶನಾಳ, ಯಂಕಪ್ಪ ದೊಡ್ಡಮನಿ, ಶರ್ಫೋದಿನ್, ರಾಘವೇಂದ್ರ ಕುಲಕರ್ಣಿ, ಜಮಾಲೋದಿನ್, ವಸಂತ, ಖಾಜಾ ಮೈನೋದಿನ್, ಬಂದೆನವಾಜ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸುರಪುರ: ಸರ್ಕಾರಿ ನೌಕರರಿಂದ ಪ್ರತಿಭಟನೆ

ಸುರಪುರ: ರಾಜ್ಯ ಸರ್ಕಾರಿ ನೌಕರರ ನೂತನ ಪಿಂಚಣಿ ಯೋಜನೆ ವಿರೋಧಿಸಿ ನಗರದ ಗಾಂಧಿವೃತ್ತದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿವಿಧ ಇಲಾಖೆಯ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ಬೋಸಗಿ ಮಾತನಾಡಿ, ‘ನೂತನ ಪಿಂಚಣಿ ಯೋಜನೆ ನೌಕರರಿಗೆ ಮಾರಕವಾಗಲಿದೆ. ಹೊಸದಾಗಿ ಸೇವೆಗೆ ಸೇರಿದ ನೌಕರರು ಇದರಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಇದು ನೌಕರರ ಪಾಲಿಗೆ ಮರಣ ಶಾಸನವಾಗಲಿದೆ. ಈ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು’ ಎಂದರು.

‘ಸಮಾನ ಶ್ರೇಣಿಯಲ್ಲಿ ನೌಕರಿ ಮಾಡುತ್ತಿರುವ ನೂತನ ನೌಕರರಿಗೆ ಪಿಂಚಣಿ ಸೌಲಭ್ಯ ನೀಡದಿರುವುದು ಅಮಾನವೀಯತೆ. ಇದು ಸರಿಯಾದ ಕ್ರಮವಲ್ಲ. ಕಾರಣ ಈ ನೂತನ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ ಸೌಲಭ್ಯವನ್ನೆ ಮುಂದುವರಿಸಬೇಕು ಮತ್ತು 6ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

‘ನಮ್ಮ ಬೇಡಿಕೆಗೆ ಸಮರ್ಪಕ ಸ್ಪಂದನೆ ಸಿಗದಿದ್ದಲ್ಲಿ, ಸೇವೆಯನ್ನ ಸ್ಥಗಿತಗೊಳಿಸಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ. ಪ್ರತಿಭಟನೆ ನಡೆಸದೇ ಅನ್ಯಮಾರ್ಗವಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು. ಶಿರಸ್ತೇದಾರ ನಜೀರ ಅಹಮದ್‌ ಅವರಿಗೆ ಅವರಿಗೆ ಮನವಿಪತ್ರ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಳ್ಳೆಪ್ಪ ಕಾಜಾಂಜಿ, ತಾಲ್ಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ, ಪ್ರಧಾನ ಕಾರ್ಯದರ್ಶಿ ಶರಣು ದೇವರಗೋನಾಲ ಮಾತನಾಡಿದರು

ಪ್ರಮುಖರಾದ ಎ.ವಿ. ತಿರಂದಾಜ, ಮಹದೇವಪ್ಪ ಗುತ್ತೇದಾರ, ಸಾಬರೆಡ್ಡಿ ವಡಗೇರಾ, ಶೇಖಸಾ ನದಾಫ, ರಾಜಶೇಖರ ದೇಸಾಯಿ, ಮಲ್ಲು ಸಜ್ಜನ, ಶರಣಗೌಡ ಪಾಟೀಲ್, ರಾಜಶೇಖರ ನಗನೂರು, ಚಂದಪ್ಪ ಯಾದವ, ಆರ್.ಕೆ ಕೋಡಿಹಾಳ, ಬಸವರಾಜ ಗೋಗಿ, ಶ್ರೀಶೈಲ್ ಯಂಕಂಚಿ, ಶಾಂತಪ್ಪ ಅಗ್ನಿ, ಮಾಳಿಂಗರಾಯ, ಗೋಪಾಲ ನಾಯಕ, ಷಣ್ಮುಖ, ತಿಪ್ಪಣ್ಣ, ಶಿವಾನಂದ, ಚನ್ನಬಸ್ಸಪ್ಪ ಹೂಗಾರ, ವಿರೇಶ ಗೋನಾಲ, ಮಲ್ಲಿಕಾರ್ಜುನ ಕಟ್ಟಿಮನಿ, ಪ್ರಶಾಂತ ಅಕ್ಕ ಸಾಲಿಗರ ಇದ್ದರು.

* * 

ಸರ್ಕಾರ ಸರ್ಕಾರಿ ನೌಕರರನ್ನು ನಿರಂತರ ದುಡಿಸಿಕೊಳ್ಳುತ್ತದೆ. ಚುನಾವಣಾ ಸಂದರ್ಭದಲ್ಲಿ ಸರ್ಕಾರಿ ನೌಕರರು ನಿರಂತರ ದುಡಿಯುವುದನ್ನು ಸರ್ಕಾರ ಮರೆತಿದೆ.
ಶಶಿಕಾಂತ ಕಶೆಟ್ಟಿ
ಅಧ್ಯಕ್ಷ
ಜಿಲ್ಲಾ ಸರ್ಕಾರಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.