ADVERTISEMENT

6ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:05 IST
Last Updated 1 ಅಕ್ಟೋಬರ್ 2012, 6:05 IST

ಚಿಂಚೋಳಿ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಚೈತನ್ಯ ಸಮಾವೇಶ ಅ.6ರಂದು ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಮೂಲಸೌಕರ್ಯ ಸಚಿವ ಸುನೀಲ ವಲ್ಯ್‌ಪುರ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನೂ ಆಹ್ವಾನಿಸಲಾಗಿದೆ ಎಂದರು.

ಬಿಎಸ್ ಯಡಿಯೂರಪ್ಪನವರೊಂದಿಗೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಆಗಮಿಸುತ್ತಿದ್ದು, ಸಂಪುಟದ ಅನೇಕ ಸಹೊದ್ಯೋಗಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಬಿಎಸ್‌ವೈ ಪಕ್ಷ ತ್ಯಜಿಸಿಲ್ಲ ಎಂದ ಸಚಿವರು, ಎರಡು ದಶಕಗಳಿಂದ ಬಿಎಸ್‌ವೈ ಬೆಂಬಲಿಗರಾಗಿದ್ದು ಮುಂದೆಯೂ ಅವರ ಬೆಂಬಲಿಗನಾಗಿರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಚೈತನ್ಯ ಸಮಾವೇಶಕ್ಕೆ ಮಾಜಿ ಸಿ.ಎಂ. ಬಿಎಸ್‌ವೈ ಅವರನ್ನು ಕರೆಸುತ್ತಿರುವುದಕ್ಕೆ ಕಾರಣ ನೀಡಿದ ಅವರು, ಬಿಎಸ್‌ವೈ ಚಿಂಚೋಳಿ ಮತಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ನೂರಾರು ಕೋಟಿ ರೂ.ಗಳನ್ನು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಿದ್ದರು ಎಂದು ವಿವರಿಸಿದರು.

ಶಿಲಾನ್ಯಾಸ: ಮತಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಚಿಂಚೋಳಿಯಿಂದ ಜಿಲ್ಲಾ ಕೇಂದ್ರ ಗುಲ್ಬರ್ಗಕ್ಕೆ ತೆರಳುವ ಮುಖ್ಯಮಾರ್ಗ ರಾಜ್ಯ ಹೆದ್ದಾರಿ-32ರ ಉಮ್ಮರ್ಗಾ ಸುಲೇಪೇಟ ಮಾರ್ಗದ ಸುಲೇಪೇಟದಿಂದ ಮಹಾಗಾಂವ್ ಕಡೆಗೆ 47.6 ಕೀ.ಮೀ ರಸ್ತೆ ನಿರ್ಮಾಣಕ್ಕೆ 25 ಕೋಟಿ ರೂ.ಗಳು ಮಂಜೂರಾಗಿದ್ದು ಸದರಿ ಕಾಮಗಾರಿಗೆ ಮತ್ತು ಕಂದಗೂಳ ಅರಣಕಲ್ ಮಾರ್ಗದ 9.3 ಕೀ.ಮೀ ರಸ್ತೆ ನಿರ್ಮಾಣಕ್ಕೆ 4.8 ಕೋಟಿ ರೂ. ಮಂಜೂರಾಗಿದ್ದು ಈ ಕಾಮಗಾರಿಗೂ ಮಾಜಿ ಸಿಎಂ ಬಿಎಸ್‌ವೈ, ಸಚಿವರಾದ ಸಿ.ಎಂ ಉದಾಸಿ, ಬಸವರಾಜ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸುವರು ಎಂದರು.

25000 ಸದಸ್ಯತ್ವ: ಬಿಎಸ್‌ವೈ ಪಕ್ಷ ತ್ಯಜಿಸುವ ಸುಳಿವು ನೀಡುತ್ತಿರುವುದರಿಂದಲೇ ವಿಧಾನ ಸಬಾ ಮತಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸುತ್ತಿಲ್ಲ ಎಂದು ಜನತೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ ವಲ್ಯ್‌ಪುರ ಈಗಾಗಲೇ 25ಸಾವಿರ ಬಿಜೆಪಿ ಕಾರ್ಯಕರ್ತರ ಸದಸ್ಯತ್ವ ಪೂರ್ಣಗೊಳಿಸಲಾಗಿದೆ ಆದರೆ ಈ ಬಗ್ಗೆ ಪ್ರಚಾರ ನೀಡಿಲ್ಲ ಎಂದರು.

ರೈತರನ್ನು ಬಲಿ ಪಶು ಮಾಡಿದ ಪ್ರಧಾನಿ: ಪ್ರಧಾನ ಮಂತ್ರಿ ಡಾ.ಮನಮೋಹನಸಿಂಗ್ ಅವರು ತಮಿಳುನಾಡಿಗೆ ಖುಷಿ ಪಡಿಸಲು ರಾಜ್ಯದ ರೈತರನ್ನು ಬಲಿ ಪಶು ಮಾಡಿದರು ಎಂದು ಟೀಕಿಸಿದರು.

ರಾಜ್ಯದ ಶೇ.80ರಷ್ಟು ತಾಲ್ಲೂಕುಗಳಲ್ಲಿ ಭೀಕರ ಬರಗಾಲವಿದೆ. ಈ ಬಗ್ಗೆ ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳೇ ಖುದ್ದು ನೋಡಿ ಹೋಗಿದ್ದಾರೆ ಹೀಗಿದ್ದರೂ ಪ್ರಧಾನ ರಾಜ್ಯಕ್ಕೆ ಅನ್ಯಾಯ ಮಾಡಿದರು. ರಾಜ್ಯ ಸರ್ಕಾರ ಕಾವೇರಿ ಸಮಸ್ಯೆ ಸಮರ್ಥವಾಗಿ ವಿವರಿಸಿದೆ. ಆದರೂ ಪ್ರಧಾನ ನಮ್ಮ ರಾಜ್ಯದ ವಾದಕ್ಕೆ ಮನ್ನಣೆ ನೀಡದಿರುವುದು ನೋವಿನ ಸಂಗತಿ ಎಂದರು. ಟಿಎಪಿಸಿಎಂಎಸ್ ಅಧ್ಯಕ್ಷ ಪ್ರಭುಲಿಂಗ ಲೇವಡಿ, ನಿರ್ದೇಶಕಿ ಮಲ್ಲೇಶ್ವರಿ ಜಾಬಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.