ADVERTISEMENT

6 ತಿಂಗಳಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

ಪ್ರಗತಿ ಪರಿಶೀಲನಾ ಸಭೆ: ರೂ.50 ಕೋಟಿ ವಿಶೇಷ ಅನುದಾನ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:37 IST
Last Updated 21 ಸೆಪ್ಟೆಂಬರ್ 2013, 8:37 IST

ಯಾದಗಿರಿ: ಜಿಲ್ಲೆಗೆ ವಿಶೇಷ ಅನುದಾನ­ದಡಿ ಮಂಜೂರಾಗಿರುವ ರೂ. 50 ಕೋಟಿ ವೆಚ್ಚದ ಕಾಮಗಾರಿಗಳನ್ನು ಸಂಬಂಧ­ಪಟ್ಟ ಇಲಾಖೆಗಳ ಅಧಿ­ಕಾರಿಗಳು 6 ತಿಂಗಳ ಅವಧಿಯ ಸ್ವಯಂ ಗುರಿ ನಿಗದಿಪಡಿಸಿಕೊಂಡು ಪೂರ್ಣ­ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಯೋಜನೆಯಡಿ ಲೋಕೋ­ಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜನಿಯರಿಂಗ್‌ ಇಲಾಖೆ, ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರಗಳ ಮೂಲಕ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂಬರುವ 6 ತಿಂಗಳ ಅವಧಿಯಲ್ಲಿ ನಿಗದಿಪಡಿಸಿದ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣ­ಗೊಳಿಸಲು ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಒಟ್ಟು 2,191 ಹುದ್ದೆಗಳು ಖಾಲಿ ಇವೆ. ಗ್ರುಪ್‌ ಎ -83, ಗ್ರುಪ್‌ ಬಿ -132, ಗ್ರುಪ್‌್ ಸಿ -1,976 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಕೊರತೆಗಳ ಮಧ್ಯೆಯೂ ಆಡಳಿತ ಯಂತ್ರ ಚುರು­ಕಾಗಿ ನಡೆಸಬೇಕಾಗಿದೆ.  ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿ­ಯಲ್ಲಿ ಮಂಜೂರಾಗಿರುವ ಅನುದಾನ­ವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಸ್ವಯಂ ಗುರಿ ನಿಗದಿಪಡಿಸಿಕೊಂಡು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಸಂಬಂಧ­ಪಟ್ಟ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಹೆಚ್ಚುವರಿ ಕಾರ್ಯದರ್ಶಿಗಳ ಗಮನಕ್ಕೆ ತರಲಾಗು­ವುದು ಎಂದು ಹೇಳಿದರು.

ಜಿಲ್ಲಾ ಸಂಕೀರ್ಣದ ಮೊದಲನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಎರಡನೇ ಹಂತದ ಕಾಮಗಾರಿಗೆ ಸಂಬಂಧಿಸಿದ ಅನು­ಮೋದನೆ­ಯನ್ನು ಪಡೆಯಬೇಕು. ಜಿಲ್ಲಾ ಸಣ್ಣ ಕೆರೆಗೆ ಹೊಂದಿಕೊಂಡು ರೂ. 1.25 ಕೋಟಿ ವೆಚ್ಚದ ಉದ್ಯಾನ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಬದಲಾಗಿ ಕೆ.ಆರ್.ಐ.ಡಿ.­ಸಿ.ಎಲ್. ಇಲಾಖೆ­ಯಿಂದ ಕೈಗೆತ್ತಿ­ಕೊಳ್ಳಬೇಕು. ನಗರದ ನೀರು ಶುದ್ಧೀ­ಕರಣ ಘಟಕದಿಂದ ಈ ಕೆರೆಗೆ ಪೈಪ್ ಲೈನ್ ಅಳವಡಿಸುವ ಕಾರ್ಯವನ್ನು ಅಕ್ಟೋಬರ್ 5 ರೊಳಗೆ ಪೂರ್ಣ­ಗೊಳಿಸಬೇಕು ಎಂದು ತಿಳಿಸಿದರು. 

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಂಪೌಂಡ್ ಗೋಡೆ ನಿರ್ಮಿಸಿದ್ದು, ಕ್ರೀಡಾ ಇಲಾಖೆಗೆ ಹಸ್ತಾಂತರಿಸಬೇಕು.   ನಗರದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡವನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು.

ರೂ. 1 ಕೋಟಿ ವೆಚ್ಚದ ಜಿಲ್ಲಾ ವಕ್ಫ್ ಕಚೇರಿ, ಕಂಪೌಂಡ್ ಹಾಗೂ ವ್ಯಾಪಾರ ಸಂಕೀರ್ಣ, ಅಲ್ಪಸಂಖ್ಯಾತರ ಸಮು­ದಾಯ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು.

ನಗರದಲ್ಲಿ ಬಾಲಭವನ ನಿರ್ಮಾಣಕ್ಕೆ ರೂ. 75 ಲಕ್ಷ ಮಂಜೂರು ಮಾಡ­ಲಾಗಿದ್ದು, ನಗರಸಭೆಯಿಂದ ನಿವೇಶನ ಗುರುತಿಸ­ಬೇಕು, ಉರ್ದು ಭವನಕ್ಕೆ ರೂ. 1 ಕೋಟಿ ಲಭ್ಯವಿದ್ದು ಫೆಬ್ರುವರಿ ಅಂತ್ಯ­ದೊಳಗೆ ಕಾಮಗಾರಿ ಪೂರ್ಣ­ಗೊಳಿಸಬೇಕು ಎಂದು ಹೇಳಿದರು.

ಯಾದಗಿರಿ ಜಿಲ್ಲೆಯ ವಿಶೇಷ ಅಭಿವೃದ್ದಿ ಅನುದಾನದಲ್ಲಿ  ಶಾಸಕರಿಗೆ ರೂ. 5 ಕೋಟಿಗಳನ್ನು ವಿವಿಧ ಅಭಿವೃದ್ಧಿ ಕಾಮ­ಗಾರಿಗಳಿಗೆ ಮೀಸಲಿಡಲಾಗಿದೆ.  ಮುಸ್ಲಿಂ ಮಹಿಳಾ ಮತ್ತು ಕಲ್ಯಾಣಕ್ಕಾಗಿ ಭವನ ನಿರ್ಮಾಣ, ಕನ್ನಡ ಭವನ ನಿರ್ಮಾಣಕ್ಕೆ ರೂ. 1 ಕೋಟಿ ಲಭ್ಯವಿದ್ದು, ಮಳೆಗಾಲದ ನಂತರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಶಹಾಪುರ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಸಮು­ದಾಯ ಭವನ, ಸುರಪುರ ತಾಲ್ಲೂಕಿನ ಕಕ್ಕೇರ ಗ್ರಾಮದಲ್ಲಿ ನಿರ್ಮಿಸುತ್ತಿರುವ ವಾಲ್ಮೀಕಿ ಭವನ, ಕನಕ ಭವನ, ಸುರಪುರ ಪಟ್ಟಣದ ತಿಮ್ಮಾಪೂರ ಶಾದಿಮಹಲ್ ನಿರ್ಮಾಣ, ಅಂಬೇ­ಡ್ಕರ್‌ ಭವನ ನಿರ್ಮಾಣ ಕಾರ್ಯ­ಗಳನ್ನು 6 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.  

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮ­ಗಾರಿ­ಗಳ ಬಗ್ಗೆ ವರದಿಯನ್ನು ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಸಲ್ಲಿಸಬೇಕು. ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಕೇಂದ್ರಸ್ಥಾನ ಬಿಡುವ ಮುಂಚೆ ಕಡ್ಡಾಯವಾಗಿ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಂಭಾವಿ ಗ್ರಾಮ ಎರಡು ಸಿಸಿ ರಸ್ತೆ, ಒಳಚರಂಡಿ, ನಾರಾಯಣಪೂರದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಕ್ರೀಡಾಂಗಣ ಪೂರ್ಣ, ಕೊಡೆಕಲ್‌ನಲ್ಲಿ ಕ್ರಿಕೆಟ್ ಕ್ರೀಡಾಂಗಣ ಕಾರ್ಯ ಪ್ರಗತಿಯಲ್ಲಿ ಎಂದು ಅಧಿಕಾರಿಗಳು ತಿಳಿಸಿದರು. 

ಸುರಪುರದ ವಾಲ್ಮೀಕಿ ಭವನ ಫೆಬ್ರುವರಿ ಅಂತ್ಯಕ್ಕೆ, ಅಂಬೇಡ್ಕರ್ ಭವನ ಜೂನ್ ಅಂತ್ಯಕ್ಕೆ, ಕಲ್ಲದೇವನಹಳ್ಳಿಯಲ್ಲಿರುವ ಕುಡಿಯುವ ನೀರು ಯೋಜನೆಗೆ ಪಂಪ್ ಹೌಸ್ ನಿರ್ಮಾಣ ಅಕ್ಟೋಬರ್ 15 ಕ್ಕೆ, ಕಕ್ಕೇರಾ ಹಾಗೂ ರಂಗಪೇಟದಲ್ಲಿ ತಲಾ ರೂ. 18 ಲಕ್ಷ ವೆಚ್ಚದಲ್ಲಿ ಶಾದಿ ಮಹಲ್, ಸುರಪುರದಲ್ಲ ಜಗ­ಜೀವನರಾಂ ಭವನ ಫೆಬ್ರುವರಿ ಅಂತ್ಯದೊಳಗೆ ಮತ್ತು ತಿಮ್ಮಾಪೂರ ಶಾದಿ ಮಹಲ್‌ಗೆ ನಿವೇಶನ ಮತ್ತು ಹುಣಸಗಿ ಗ್ರಾಮದಲ್ಲಿ ಬಂಜಾರಾ ಭವನ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಬಗೆಹರಿಸಿಕೊಂಡು ಕಾಮಗಾರಿ ಪೂರ್ಣ­ಗೊಳಿಸುವುದಾಗಿ ಅಧಿಕಾರಿ­ಗಳು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಅತಿವೃಷ್ಟಿ: ಹಾನಿ ವರದಿ ನೀಡಲು ಸೂಚನೆ
ಜಿಲ್ಲೆಯಲ್ಲಿ ಈಚೆಗೆ ಆದ ಅತಿವೃಷ್ಟಿಯಿಂದ ಬೆಳೆ ಹಾನಿ, ರಸ್ತೆ ಸಂಪರ್ಕ ಕಡಿತದಿಂದ ಆದ ಹಾನಿಗಳ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಕ್ರಿಯಾ ಯೋಜನೆಯೊಂದನ್ನು ರೂಪಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ­ಯಿಂದ ಆದ ಹಾನಿ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ  ಮಾತನಾಡಿದರು.

ಅತಿವೃಷ್ಟಿಯಿಂದ ಆದ ಜೀವಹಾನಿ ಮತ್ತು ಮನೆಗಳ ಹಾನಿಗೆ ಸಂಬಂಧ­ಪಟ್ಟಂತೆ ಆಯಾ ತಾಲ್ಲೂಕಿನ ತಹಶಿೀಲ್ದಾರರು ಸರ್ಕಾರ ಸೂಚಿಸಿದ ನಿಯಮಾವಳಿಯಂತೆ ಅರ್ಹ ಫಲಾ­ನುಭವಿ­ಗಳಿಗೆ ಪರಿಹಾರವನ್ನು ವಿತರಿಸ­ಬೇಕು. ಅದರಂತೆ ಬೆಳೆ ಹಾನಿ, ರಸ್ತೆ ದುರಸ್ತಿ, ವಿವಿಧ ಸರ್ಕಾರಿ ಕಟ್ಟಡಗಳಿಗೆ ಆದ ಹಾನಿ, ವಿದ್ಯುತ್ ಸಂಪರ್ಕ ಕಡಿತ, ಕುಡಿಯುವ ನೀರು ಯೋಜನೆ ದುರಸ್ತಿ, ಸೇತುವೆ, ಕೆರೆ ಕಟ್ಟೆ, ಕಾಲುವೆ ಹಾನಿಗಳ ಬಗ್ಗೆ ಕ್ರಿಯಾ ಯೋಜನೆಯೊಂದನ್ನು ಸಲ್ಲಿಸುವಂತೆ ಸೂಚಿಸಿದರು.

ಬೆಳೆ ಪರಿಹಾರವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲು ಸಮಗ್ರವಾದ ಸಮೀಕ್ಷೆ ನಡೆಸುವ ಅವಶ್ಯಕತೆ ಇದ್ದು, ನಿಯೋಜಿಸಿದ ತಂಡದ ಅಧಿ­ಕಾರಿಗಳು ಸಮಗ್ರ ಕ್ರಿಯಾಯೋಜನೆ ಸಲ್ಲಿಸಬೇಕು. ಈಗಾಗಲೇ ನೇಮಿಸಿರುವ ನೋಡಲ್ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾ­ಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಿರುವ ಕಂಟ್ರೋಲ್ ರೂಮ್‌ಗೆ ಪ್ರತಿ ಮೂರು ದಿನಕೊಮ್ಮೆ ಅತಿವೃಷ್ಟಿಯಿಂದ ಆದ ಹಾನಿ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು. 

ಮನೆ ಹಾನಿಗಳಿಗೆ ಸಂಬಂಧೆ ಆಯಾ ತಹಶೀಲ್ದಾರರು ಅಧಿಕೃತ ಮಾಹಿತಿ­ಆಯಾ ಗ್ರಾಮ­ಲೆಕ್ಕಾಧಿಕಾರಿಗಳಿಂದ ಪಡೆಯ­ಬೇಕು.     ಆರೋಗ್ಯ ಇಲಾಖೆ ಅಧಿಕಾರಿಗಳು ನೀರು ನಿಲ್ಲುವುದರಿಂದ ಆಗುವ ಸಾಂಕ್ರಾಮಿಕ ರೋಗ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದರು.  ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು, ಅವಶ್ಯಕ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.