ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಶೇ 65ರಷ್ಟು ಬೆಳೆ ಸಮೀಕ್ಷೆ

ಆರು ತಾಲ್ಲೂಕುಗಳಲ್ಲಿ 4,24,808 ತಾಕುಗಳು, 1.14 ಲಕ್ಷ ತಾಕು ರೈತರಿಂದ ಸ್ವಯಂ ಸಮೀಕ್ಷೆ

ಬಿ.ಜಿ.ಪ್ರವೀಣಕುಮಾರ
Published 25 ಸೆಪ್ಟೆಂಬರ್ 2020, 1:17 IST
Last Updated 25 ಸೆಪ್ಟೆಂಬರ್ 2020, 1:17 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹುರಸಗುಂಡಗಿಯಲ್ಲಿ ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹುರಸಗುಂಡಗಿಯಲ್ಲಿ ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು   

ಯಾದಗಿರಿ:ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವ್ಯಾಪಕ ಪ್ರಚಾರ, ಖಾಸಗಿ ನಿವಾಸಿಗಳನ್ನು ತೊಡಗಿಸಿಕೊಂಡು ಸಮೀಕ್ಷೆ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿ ಶೇ 65.95ರಷ್ಟು ಗುರಿ ಸಾಧಿಸಲಾಗಿದೆ.

ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ಮೊಬೈಲ್‌ ಆ್ಯಪ್‌ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ಸಮೀಕ್ಷಾ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಆರು ತಾಲ್ಲೂಕುಗಳು ಸೇರಿ 4,24,808 ತಾಕುಗಳಿದ್ದು, ಇದರಲ್ಲಿ 1,14,110 ತಾಕುಗಳನ್ನು ರೈತರು ಸ್ವಯಂ ಸಮೀಕ್ಷೆ ಮಾಡಿದ್ದಾರೆ. 1,59,641 ತಾಕುಗಳನ್ನು ಖಾಸಗಿ ಸಂಪನ್ಮೂಲ ವ್ಯಕ್ತಿ (ಪಿಆರ್‌)ಗಳಿಂದ ಸಮೀಕ್ಷೆ ಮಾಡಲಾಗಿದೆ.

ADVERTISEMENT

ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನಲ್ಲಿ 15,438 ರೈತರು, ಹುಣಸಗಿ ತಾಲ್ಲೂಕಿನಲ್ಲಿ 28,234, ಶಹಾಪುರ ತಾಲ್ಲೂಕಿನಲ್ಲಿ 18,006, ಸುರಪುರ ತಾಲ್ಲೂಕಿನಲ್ಲಿ 12,258, ವಡಗೇರಾ ತಾಲ್ಲೂಕಿನಲ್ಲಿ 22,980, ಯಾದಗಿರಿತಾಲ್ಲೂಕಿನಲ್ಲಿ 17,194 ರೈತರು ಸ್ವಯಂ ಸಮೀಕ್ಷೆ ಮಾಡಿದ್ದಾರೆ.

ಜಮೀನಿನಲ್ಲಿರುವ ಬಹು ವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ರೈತರೇ ಆಪ್‌ಲೋಡ್‌ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ.ಜಿಲ್ಲೆಯಲ್ಲಿ 566 ಖಾಸಗಿ ವ್ಯಕ್ತಿಗಳಿಂದಲೂ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಒಂದು ಬೆಳೆಗೆ ₹10 ಸಿಗುತ್ತದೆ.

ಬೆಳೆ ಸಮೀಕ್ಷೆ ಉಪಯೋಗ?:

ಬೆಳೆ ಸಮೀಕ್ಷೆಯು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ ಪ್ರವಾಹ, ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು ನೆರವಾಗುತ್ತದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿಗೆ, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಇದು ಉಪಯುಕ್ತವಾಗಿದೆ ಎನ್ನುವುದು ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ.

‘ರೈತರಿಗೆ ಅನುಕೂಲವಾಗಲೆಂದು ಇನ್ನೂ ಕೆಲ ದಿನಗಳ ಕಾಲ ಬೆಳೆ ಸಮೀಕ್ಷೆ ಅವಧಿ ವಿಸ್ತರಣೆ ಮಾಡಬೇಕು ಎಂದು ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎನ್ನುತ್ತಾರೆರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.