ADVERTISEMENT

ಯಾದಗಿರಿ: ಅಪರಾಧ ತಡೆಗೆ ಸಿಸಿಟಿವಿ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:20 IST
Last Updated 17 ಆಗಸ್ಟ್ 2025, 7:20 IST
<div class="paragraphs"><p>ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸಿಸಿಟಿವಿ ಕ್ಯಾಮೆರಾ ಕಾರ್ಯಾಚರಣೆಯ ಶಿಲಾಫಲಕವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಉದ್ಘಾಟಿಸಿದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು</p></div>

ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸಿಸಿಟಿವಿ ಕ್ಯಾಮೆರಾ ಕಾರ್ಯಾಚರಣೆಯ ಶಿಲಾಫಲಕವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಉದ್ಘಾಟಿಸಿದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು

   

ಯಾದಗಿರಿ: ‘ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯನ್ನು ನಿಯಂತ್ರಿಸಲು ನಗರ ಹಾಗೂ ಸುತ್ತಲ್ಲಿನ ಪ್ರಮುಖ ರಸ್ತೆಗಳಲ್ಲಿ 84 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಹೇಳಿದರು.

ಇಲ್ಲಿನ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಾಚರಣೆ ಹಾಗೂ ನಿಯಂತ್ರಣ ಕೊಠಡಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಶಾಸಕರ ಅನುದಾನದಡಿ ₹ 53.30 ಲಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ₹ 17.40 ಲಕ್ಷ ಸೇರಿ ಒಟ್ಟು ₹ 70.70 ಲಕ್ಷ ಅನುದಾನ ಬಳಸಿಕೊಂಡು 84 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ನಗರದ ನಾಲ್ಕೂ ದಿಕ್ಕುಗಳಿಗೆ ತಂತ್ರಜ್ಞಾನದ ಕಣ್ಗಾವಲು ಇರಲಿದೆ’ ಎಂದರು.

‘ನಗರದ ರಸ್ತೆಗಳು, ಪ್ರಮುಖ ಸ್ಥಳಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಯಂತ್ರಣ ಕೊಠಡಿಯಲ್ಲಿ ಕುಳಿತು ನಿಗಾ ಇರಿಸಬಹುದು. ಅಗತ್ಯವಾದ ಸೂಚನೆಗಳನ್ನು ಕೊಠಡಿಯಿಂದಲೇ ಕೊಡಬಹುದು. ವಾಹನಗಳನ್ನು ಕದ್ದು, ಕಳ್ಳತನ ಮಾಡಿ ನಗರದಿಂದ ತಪ್ಪಿಸಿಕೊಂಡು ಹೋಗುವವರ ಪತ್ತೆಗೂ ನೆರವಾಗಲಿವೆ’ ಎಂದು ಹೇಳಿದರು.

‘ಬೈಕ್‌ನಲ್ಲಿ ತ್ರಿಬಲ್ ರೈಡ್, ಸಿಗ್ನಲ್ ಜಂಪ್‌ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಪತ್ತೆಯಾಗುವರು. ಸಿಸಿಟಿವಿ ಕ್ಯಾಮೆರಾ ಮೂಲಕ ಪತ್ತೆಯಾಗಿ, ನಿಯಮ ಉಲ್ಲಘಿಸಿದವರ ಮನೆಗೆ ಚಲನ್ ತಲುಪಲಿದೆ. ವಾಹನ ಬಿಡಿಸುವಂತೆ ನನಗೆ ಬರುವ ಫೋನ್‌ ಕರೆಗಳು ತಪ್ಪಲಿವೆ’ ಎಂದು ಹಾಸ್ಯ ದಾಟಿಯಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ತಂತ್ರಜ್ಞಾನವನ್ನು ಬಳಸಿಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ. ಸಿಸಿಟಿವಿ ಕ್ಯಾಮೆರಾಗಳಿಂದ ಜನರಲ್ಲಿ ಶಿಸ್ತು ಮೂಡಲಿದ್ದು, ಪೊಲೀಸರಿಗೂ ಅಪರಾಧಿಗಳ ಪತ್ತೆಗೆ ಸಹಾಯವಾಗಲಿದೆ’ ಎಂದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ‘ನಗರದ ಟ್ರಾಫಿಕ್ ಸಮಸ್ಯೆಗಳಿಗೆ ಕಡಿವಾಣ ಹಾಕಲು ಶಾಸಕರು ಮತುವರ್ಜಿ ವಹಿಸಿ ಅನುದಾನ ನೀಡಿದ್ದಾರೆ. ನಗರದ ವಾರ್ಡ್‌ಗಳ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಶಾಸಕರು ತಮ್ಮ ಅನುದಾನ ನೀಡಬೇಕು. ಆ ಮೂಲಕ ಮನೆ ಕಳ್ಳತನ ತಡೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ನಗರದ ಯಾವೆಲ್ಲಾ ವಾರ್ಡ್‌ಗಳಿಗೆ ಅಳವಡಿಸಬೇಕು ಎಂಬುದನ್ನು ಎಸ್‌ಪಿಯಿಂದ ಮಾಹಿತಿ ಪಡೆಯುತ್ತೇನೆ. ಹಂತ–ಹಂತವಾಗಿ ಕ್ರಮ ತೆಗೆದುಕೊಳ್ಳಲಾವುದು’ ಎಂದು ಭರವಸೆ ನೀಡಿದರು.

ಇದೇ ವೇಳೆ ಗಾಂಧಿ ವೃತ್ತದಲ್ಲಿನ ಗಾಂಧಿ ಪ್ರತಿಮೆ ಸ್ಥಳದ ನವೀಕರಣದ ಶಿಲಾ ಫಲಕವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ, ಡಿಎಸ್‌ಪಿಗಳಾದ ಭರತ ಕುಮಾರ್, ಸುರೇಶ ನಾಯಕ್, ಜಾವೇದ್ ಇನಾಂದಾರ್, ಸಿಪಿಐ ಸುನಿಲ್ ಕುಮಾರ್, ಪಿಎಸ್‌ಯ ಮಂಜನಗೌಡ ಉಪಸ್ಥಿತರಿದ್ದರು.

‘ಮಕ್ಕಳ ಕೈಗೆ ಬೈಕ್‌ ಕೊಟ್ಟರೆ ದಂಡ’

‘ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಕೆಗಾಗಿ ಎನ್‌ಐಸಿಗೆ ಪತ್ರ ಬರೆಯಲಾಗಿದೆ. ಒಂದೂವರೆ ತಿಂಗಳಲ್ಲಿ ಅಳವಡಿಕೆಯಾಗಲಿದ್ದು ಮಕ್ಕಳ ಕೈಗೆ ದ್ವಿಚಕ್ರ ವಾಹನಗಳನ್ನು ಕೊಟ್ಟ ಪೋಷಕರಿಗೆ ₹ 25 ಸಾವಿರವರೆಗೆ ದಂಡ ಬೀಳಲಿದೆ’ ಎಂದು ಎಸ್‌ಪಿ ಪೃಥ್ವಿಕ ಶಂಕರ ಎಚ್ಚರಿಸಿದರು. ‘ನಗರದ ಸಂಚಾರ ನಿಯಮ ಪಾಲನೆ ಅವ್ಯವಸ್ಥೆಯಿಂದ ಕೂಡಿದೆ. ಬೈಕ್‌ನಲ್ಲಿ ತ್ರಿಬಲ್ ರೈಡ್ ಚಾಲನೆ ವೇಳೆ ಮೊಬೈಲ್ ಸಿಗ್ನಲ್ ಜಂಪ್‌ ಸಾಮಾನ್ಯವಾಗಿದೆ. ಇವುಗಳ ನಿಯಂತ್ರಣಕ್ಕೆ ಮುಂದಾಗಿ ನಿತ್ಯ ಶುಲ್ಕ ವಿಧಿಸಲಾಗುವುದು’ ಎಂದರು. ‘ಮಕ್ಕಳಿಗೆ ಬೈಕ್ ಕೊಟ್ಟ ಪೋಷಕರೊಬ್ಬರಿಗೆ ₹ 25 ಸಾವಿರ ದಂಡ ಹಾಕಲಾಗಿದೆ. ಅಪ್ರಾಪ್ತ ವಾಹನ ಚಾಲಕರ ಮೇಲೆ ನಿಗಾ ಇರಿಸಲಾಗುವುದು. ಮಕ್ಕಳ ಪೋಷಕರಿಗೆ ದಂಡದ ಜೊತೆಗೆ 3 ತಿಂಗಳು ಜೈಲು ಶಿಕ್ಷೆಯೂ ಆಗಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.