
ಯಾದಗಿರಿ: ‘ಆನೆಕಾಲು ರೋಗ (ಲಿಂಫ್ಯಾಟಿಕ್ ಫೈಲೇರಿಯಾ) ನಿವಾರಣೆಗಾಗಿ ಜಿಲ್ಲೆಯಾದ್ಯಂತ ಸೆ.24ರಿಂದ ಅ. 6ರವರೆಗೆ ಜಿಲ್ಲೆಯಲ್ಲಿ 12,45,250 ಜನರಿಗೆ ಸಾಮೂಹಿಕ ಡಿಇಸಿ ನುಂಗಿಸುವ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹಬೀಬ ಉಸ್ಮಾನ್ ಪಟೇಲ್ ಹೇಳಿದರು.
ನಗರದ ಗಾಂಧಿವೃತ್ತದಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆನೆಕಾಲು ರೋಗ ಹೊಂದಿರುವ ರೋಗಿಗಳು ಈ ರೋಗವನ್ನು ಹಬ್ಬಿಸುವುದಿಲ್ಲ. ಬದಲಾಗಿ ಮೈಕ್ರೋಫೈಲೇರಿಯಾ ಪಾಸಿಟಿವ್ ಹೊಂದಿರುವ ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳೇ ಈ ರೋಗ ಹರಡಲಿದೆ. ಒಟ್ಟು 2,440 ಸಿಬ್ಬಂದಿ ಮನೆ-ಮನೆ ಭೇಟಿ ನೀಡಿ ಡಿಇಸಿ ಮಾತ್ರೆಯನ್ನು ಊಟದ ನಂತರ ನುಂಗಿಸುವರು. ಅಲ್ಬೆಂಡಜೋಲ್ ಮಾತ್ರೆಗಳನ್ನು ಬಾಯಿಯಲ್ಲಿಟ್ಟು ಚೀಪಬೇಕು. ಈ ಗುಳಿಗೆಗಳು ಅತ್ಯಂತ ಸುರಕ್ಷಿತವಾಗಿದ್ದು, ಕಳೆದ 50 ವರ್ಷಗಳಿಂದ ವಿಶ್ವದಾದ್ಯಂತ ಉಪಯೋಗಿಸಲ್ಪಡುತ್ತಿವೆ’ ಎಂದರು.
‘ಯಾದಗಿರಿ, ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ ಆನೆಕಾಲು ರೋಗ ಹೆಚ್ಚು ಇದೆ. ಐದು ವರ್ಷಗಳ ಕಾಲ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಬಾರಿ ಈ ಎರಡು ಮಾತ್ರೆಗಳನ್ನು ಸೇವಿಸಿದಲ್ಲಿ ಮುಂದಿನ ಪೀಳಿಗೆಯವರು ಆನೆಕಾಲು ರೋಗದಿಂದ ಮುಕ್ತವಾಗುತ್ತಾರೆ. ಸಣ್ಣ-ಪುಟ್ಟ ತೊಂದರೆಗಳಿಗೆ ಹೆದರಿ ಈ ಮಾತ್ರೆ ಸೇವಿಸದಿದ್ದಲ್ಲಿ ಆನೆಕಾಲು ರೋಗ ನಿಯಂತ್ರಣ ಅಸಾಧ್ಯ. ಆದ್ದರಿಂದ, ಪ್ರತಿಯೊಬ್ಬರೂ ಸೇವಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಮಾತನಾಡಿ,‘ಎರಡು ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ, ಮೂತ್ರಪಿಂಡ ಸಂಬಂಧಿ, ದೀರ್ಘಾವಧಿ ಕಾಯಿಲೆ, ಹೃದಯ ಮತ್ತು ಶ್ವಾಸಕೋಶ ರೋಗದಿಂದ ನರಳುತ್ತಿರುವವರಿಗೆ ಸಾಮೂಹಿಕ ಔಷಧ ನೀಡಿಕೆ ಇರುವುದಿಲ್ಲ. ಅಲ್ಲದೆ, ಈ ಮಾತ್ರೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು’ ಎಂದು ಸಲಹೆ ನೀಡಿದರು.
‘ಡಿಇಸಿ ಮಾತ್ರೆಗೆ ರಕ್ತದಲ್ಲಿ ಇರುವ ಮೈಕ್ರೊಫೈಲೇರಿಯಾ ಜಂತುಗಳು ನಾಶಹೊಂದುವುದರಿಂದ ಕೆಲವೊಮ್ಮೆ ಜ್ವರ, ತಲೆನೋವು, ಮೈ-ಕೈ ನೋವು, ಮೈ ಉರಿ ಮತ್ತು ಕೆರೆತ ಕಾಣಿಸಿಕೊಳ್ಳಬಹುದು. ಈ ಅಡ್ಡ ಪರಿಣಾಮಗಳು ತಾತ್ಕಾಲಿಕವಾಗಿದ್ದು , ತಾನೇ ತಾನಾಗಿ ಒಂದು ದಿವಸದಲ್ಲಿ ಉಪಶಮನವಾಗುತ್ತವೆ. ವೈದ್ಯರ ನೇತೃತ್ವದಲ್ಲಿ ಅಡ್ಡ ಪರಿಣಾಮಗಳ ನಿವಾರಣಾ ತಂಡಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಚಿಸಲಾಗಿದೆ’ ಎಂದು ವಿವರಿಸಿದರು.
ದೈಹಿಕ ಶಿಕ್ಷಣಾಧಿಕಾರಿ ಎಸ್.ಕೆ.ಸೋನಾರ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಿಂಗಪ್ಪ, ಶಿಕ್ಷಕ ಗುರುನಾಥರೆಡ್ಡಿ, ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ ಕಂದಕೂರ, ಶರಣಯ್ಯ ಗಣಾಚಾರಿ, ಸಮಾಲೋಚಕ ಬಸವರಾಜ ಕಾಂತಾ, ಅಂಬಾದಾಸ ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಕೋಲಿವಾಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಗಾಂಧಿವೃತ್ತದವರೆಗೆ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.