ADVERTISEMENT

ಶಿವನ ಒಲುಮೆಗೆ ಭಾವ ಶುದ್ಧಿ ಅಗತ್ಯ: ಗಂಗಾಧರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 10:52 IST
Last Updated 13 ಜನವರಿ 2019, 10:52 IST
ಯಾದಗಿರಿ ಸಮೀಪದ ಅಬ್ಬೆತುಮಕೂರು ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಾರಾಧ್ಯರ ಧರ್ಮಪತ್ನಿ ಬಸ್ಸಮ್ಮ ತಾಯಿಯ ಜಾತ್ರಾಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು
ಯಾದಗಿರಿ ಸಮೀಪದ ಅಬ್ಬೆತುಮಕೂರು ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಾರಾಧ್ಯರ ಧರ್ಮಪತ್ನಿ ಬಸ್ಸಮ್ಮ ತಾಯಿಯ ಜಾತ್ರಾಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು   

ಯಾದಗಿರಿ: ‘ಪ್ರತಿಯೊಬ್ಬರೂ ಜೀವನದಲ್ಲಿ ಭಕ್ತಿ, ಶ್ರದ್ಧೆಯಿಂದ, ಇರಬೇಕು, ಶಿವನ ಒಲುಮೆಯನ್ನು ಸಂಪಾದಿಸಿಕೊಳ್ಳಬೇಕಾದರೆ ಭಾವಶುದ್ಧಿಯಿಂದ ಆರಾಧಿಸಬೇಕಾಗುತ್ತದೆ’ ಎಂದು ಅಬ್ಬೆತುಮಕೂರು ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ಶುಕ್ರವಾರ ವಿಶ್ವಾರಾಧ್ಯರ ಧರ್ಮಪತ್ನಿ ಬಸ್ಸಮ್ಮ ತಾಯಿಯ ಜಾತ್ರಾಮಹೋತ್ಸವದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.‘ಸಾಂಸಾರಿಕ ಜಂಜಾಟದಲ್ಲಿ ತೊಳಲಾಡುತ್ತಾ ಭವ ಬದುಕಿಗೆ ಸಿಲುಕಿಕೊಳ್ಳಬಾರದು. ನಶ್ವರವಾದ ಈ ಜೀವನದ ಜಂಜಾಟದಿಂದ ಪಾರಾಗಲೂ ಶಾಶ್ವತವಾದ ಘನಸಂಪತ್ತನ್ನು ಪಡೆಯಲು ಭಕ್ತಿ, ಶ್ರದ್ಧೆಯಿಂದ ಜೀವನವನ್ನು ನಡೆಸಬೇಕು’ ಎಂದು ಹೇಳಿದರು.

‘ವಿಶ್ವಾರಾಧ್ಯರು ಅನಂತ ಲೀಲೆಗಳಿಂದ ಜಗದೊಡೆಯನಾಗಿ ಮೆರೆದ ಮಹಿಮಪುರುಷರು. ಈ ಸಿದ್ದಿ ಪುರುಷನ ಸಾಧನೆಗೆ ಆಸರೆಯಾಗಿ ಬಸ್ಸಮ್ಮ ತಾಯಿ ನಿಂತಿದ್ದರು. ವಿರಾಟ ಪುರುಷ ವಿಶ್ವಾರಾಧ್ಯ ಒಡ್ಡುವ ಎಲ್ಲ ಸವಾಲುಗಳನ್ನು ಅತ್ಯಂತ ಧೀಶಕ್ತಿಯಿಂದ ಎದುರಿಸಿ ಗಂಡನಿಗೆ ತಕ್ಕ ಮಡದಿಯಾಗಿ ಮಹಾತ್ಮಳೆನಿಸಿಕೊಂಡರು’ ಎಂದರು.

ADVERTISEMENT

‘ಸಾಂಸಾರಿಕ ಜೀವನದಲ್ಲಿ ಗಂಡ ಹೆಂಡತಿ ಸಮಾನರಾಗಿ ಏಕೋಭಾವದಿಂದ ಬಾಳಿ ಬದುಕಬೇಕು. ಮೇಲುಕೀಳೆಂಬ ಭಾವತೊರೆದು ಇಬ್ಬರೂ ಸಮಾನರೆಂಬ ವಿಶಾಲ ಮನೋಭಾವ ಹೊಂದಿದಾಗ ಸಾಂಸಾರಿಕ ಜೀವನ ಸುಂದರಮಯವಾಗುತ್ತದೆ’ ಎಂದು ಹೇಳಿದರು.

ಬೆಳಿಗ್ಗೆ ಬಸ್ಸಮ್ಮ ತಾಯಿಯ ಕರ್ತೃ ಗದ್ದುಗೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಸಂಜೆ ಶ್ರೀಮಠದಿಂದ ಅಬ್ಬೆತುಮಕೂರಿನ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿ, ಡೊಳ್ಳು ವಾದ, ಸುಮಂಗಲಿಯರ ಕಳಸ, ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.

ನಂತರ ಬಸ್ಸಮ್ಮ ತಾಯಿಯ ರಥೋತ್ಸವವನ್ನು ಅತ್ಯಂತ ಭಕ್ತಿಯಿಂದ ನಡೆಸಲಾಯಿತು. ಜಾತ್ರಾಮಹೋತ್ಸವಕ್ಕೆ ಆಗಮಿಸಿದ ಸಮಸ್ತ ಭಕ್ತರಿಗೆ ಕಾಡಂಮಗೇರಾ ವಿಶ್ವಾರಾಧ್ಯ ಸೇವಾ ಸಮಿತಿವತಿಯಿಂದ ಪ್ರಸಾದ ಸೇವೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.