ADVERTISEMENT

ರಸ್ತೆ ಸುರಕ್ಷತಾ ನಿಯಮ ಪಾಲಿಸಲು ಸಲಹೆ

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಆರ್‌ಟಿಒ ದಾಮೋದರ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 1:51 IST
Last Updated 22 ಜನವರಿ 2021, 1:51 IST
ಯಾದಗಿರಿಯಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿದರು
ಯಾದಗಿರಿಯಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿದರು   

ಯಾದಗಿರಿ: ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಸಲಹೆ ನೀಡಿದರು.

ನಗರದ ಸರ್ಕಾರಿಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅವರು ಮಾತನಾಡಿದರು.

ಸರ್ಕಾರದ ಆದೇಶದಂತೆ ಪ್ರತಿವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಒಂದು ತಿಂಗಳ ಕಾಲ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಕುರಿತು ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಬೀದಿಪಾಲು ಮಾಡುತ್ತಾರೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‍ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದುಸೂಚಿಸಿದರು.

ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯತೆ ತೋರದೆ ನಿಯಮ ಪಾಲನೆ ಮಾಡಬೇಕು. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದರು.

ಈ ವೇಳೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ, ಆರ್‌ಟಿಒ ಸಿಬ್ಬಂದಿ ಮೌನೇಶ, ಶಿವಕುಮಾರ್, ಆನಂದ, ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.