ADVERTISEMENT

ಯಾದಗಿರಿ| ಪ್ರಥಮ ಸ್ಥಾನ ಪಡೆಯಲು ಶ್ರಮಿಸಲು ಸಲಹೆ

ಮಹತ್ವಾಕಾಂಕ್ಷೆ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 17:30 IST
Last Updated 11 ಡಿಸೆಂಬರ್ 2019, 17:30 IST
ಮಹತ್ವಾಕಾಂಕ್ಷೆ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಯ ನೋಡಲ್ ಅಧಿಕಾರಿ ಬಿ.ಆನಂದ್ ಮಾತನಾಡಿದರು
ಮಹತ್ವಾಕಾಂಕ್ಷೆ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಯ ನೋಡಲ್ ಅಧಿಕಾರಿ ಬಿ.ಆನಂದ್ ಮಾತನಾಡಿದರು   

ಯಾದಗಿರಿ: ಕೇಂದ್ರ ಸರ್ಕಾರದ ನೀತಿ ಆಯೋಗವು ಗುರುತಿಸಿದ ಮಹತ್ವಾಕಾಂಕ್ಷೆ ಜಿಲ್ಲೆಗಳ ರ್‍ಯಾಕಿಂಗ್‍ನಲ್ಲಿ ಜಿಲ್ಲೆಪ್ರಥಮ ಸ್ಥಾನ ಪಡೆಯಲು ಅಧಿಕಾರಿಗಳು ಶ್ರಮಿಸಬೇಕು ಎಂದು ನವದೆಹಲಿಯ ಎಫ್‍ಎ, ಡಿಬಿಟಿ, ಎಂಒಇಎಸ್ ಅಂಡ್ ಡಿಎಸ್‍ಟಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಮಹತ್ವಾಕಾಂಕ್ಷೆ ಜಿಲ್ಲೆಯ ನೋಡಲ್ ಅಧಿಕಾರಿ ಬಿ.ಆನಂದ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಹತ್ವಾಕಾಂಕ್ಷೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸೆಪ್ಟೆಂಬರ್ ತಿಂಗಳಲ್ಲಿದ್ದ ಸ್ಕೋರ್ 48.9ರಿಂದ ಅಕ್ಟೋಬರ್‌ನಲ್ಲಿ 48.5ಕ್ಕೆ ಇಳಿಮುಖವಾಗಿದೆ. ಡೆಲ್ಟಾ ರ್‍ಯಾಕಿಂಗ್‍ನಲ್ಲಿ 90ನೇ ಸ್ಥಾನ ಪಡೆದಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದರು.

ADVERTISEMENT

ಕಾರ್ಯಕ್ರಮಗಳ ಅನುಷ್ಠಾನದ ಅಂಕಿ-ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸ್ಕೋರ್ ಮತ್ತು ಡೆಲ್ಟಾ ರ್‍ಯಾಕಿಂಗ್‍ ಮೇಲೆ ಜಿಲ್ಲೆಯ ಪ್ರಗತಿಯನ್ನು ಪರಿಗಣಿಸಲಾಗುತ್ತದೆ. ಮೂಲಸೌಕರ್ಯದಲ್ಲಿ ಮಾತ್ರ ಸೆಪ್ಟೆಂಬರ್ ತಿಂಗಳಲ್ಲಿದ್ದ ಸ್ಕೋರ್ 60ರಿಂದ ಅಕ್ಟೋಬರ್‌ನಲ್ಲಿ 61.2ಕ್ಕೆ ಏರಿಕೆ ಕಂಡುಬಂದಿದೆ.

ಶಿಕ್ಷಣದಲ್ಲಿ ಈ ಎರಡು ತಿಂಗಳ ಸ್ಕೋರ್ 42.9ಕ್ಕೆ ಸ್ಥಿರವಾಗಿದೆ. ಆದರೆ, ಆರೋಗ್ಯ ಮತ್ತು ಪೌಷ್ಟಿಕಾಂಶ ಪ್ರಗತಿಯಲ್ಲಿನ ಸ್ಕೋರ್ 76.5ರಿಂದ 75.2ಕ್ಕೆ ಇಳಿಮುಖವಾಗಿದೆ. ಕೃಷಿ ಮತ್ತು ಜಲಸಂಪನ್ಮೂಲ ವಿಭಾಗದಲ್ಲಿ 19.7ರಿಂದ 19.2ಕ್ಕೆ ಇಳಿಮುಖವಾಗಿದೆ. ಆರ್ಥಿಕ ಹಾಗೂ ಕೌಶಲ ಅಭಿವೃದ್ಧಿಯಲ್ಲಿನ ಸ್ಕೋರ್ 25.2ರಿಂದ 24.9ಕ್ಕೆ ಇಳಿಮುಖವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಅವಶ್ಯಕತೆಯಿದ್ದಲ್ಲಿ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸುವಂತೆ ಅವರು ಪ್ರಾಂಶುಪಾಲರಿಗೆ ಸೂಚಿಸಿದರು.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‍ಗಳ ನೋಂದಣಿಯಲ್ಲಿ ಜಿಲ್ಲೆಯು ಹಿಂದುಳಿದಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಈ ಯೋಜನೆ ತುಂಬಾ ಉಪಯುಕ್ತವಾಗಿದ್ದು, ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಅನಿಮಿಯಮುಕ್ತ ಜಿಲ್ಲೆಗಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ಹೊಂದಿದ 230 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಫಲಿತಾಂಶ ಹೆಚ್ಚಳಕ್ಕಾಗಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಅಲ್ಲದೆ, ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ,ಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಟಾಟಾ ಟ್ರಸ್ಟ್, ಅಜೀಂ ಪ್ರೇಮ್‍ಜಿ ಫೌಂಡೇಷನ್, ಸೆಲ್ಕೊ, ಬಿಇಎಲ್, ಎಂಆರ್‍ಪಿಎಲ್-ಸಿಎಸ್‍ಆರ್, ಎಚ್‍ಪಿಸಿಎಲ್-ಸಿಎಸ್‍ಆರ್ ರಾಜ್ಯ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.