ADVERTISEMENT

ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ಆರೋಪ; ಅಧಿಕಾರಿಗಳ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:48 IST
Last Updated 16 ಸೆಪ್ಟೆಂಬರ್ 2024, 15:48 IST

ಗುರುಮಠಕಲ್‌: ತಾಲ್ಲೂಕಿನ ಗುಂಜನೂರು ಕ್ರಾಸ್‌ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ವಿದ್ಯಾರ್ಥಿನಿಯರರೊಂದಿಗೆ ಅನುಚಿತ ವರ್ತನೆ ಕುರಿತು ಆರೋಪಗಳು ಕೇಳಿಬಂದಿದ್ದು, ಸೋಮವಾರ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಶಾಲೆಯಲ್ಲಿ ಕೆಲ ಶಿಕ್ಷಕರ ಅಸಭ್ಯ ವರ್ತನೆ ಕುರಿತು ಆರೋಪ ಕೇಳಿ ಬರುತ್ತಿದ್ದಂತೆ ಸೋಮವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ.ಸರೋಜಾ ‍ಅವರು ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರೇಮಕುಮಾರ, ಜಿಲ್ಲಾ ವಸತಿ ಶಿಕ್ಷಣ ಸಂಸ್ಥೆಗಳ ಸಮನ್ವಯಾಧಿಕಾರಿ ಸುರೇಶ ತಡಿಬಿಡಿ ಮಕ್ಕಳೊಂದಿಗೆ ಕಾಲ ಕಳೆದಿದ್ದು, ಶಾಲೆಯ ವಾತಾವರಣ ಮತ್ತು ಶಿಕ್ಷಕರ ಕುರಿತು ಮಕ್ಕಳಿಂದ ಮಾಹಿತಿ ಕಲೆಹಾಕಿದ್ದಾರೆ.

ADVERTISEMENT

ಗುರುಮಠಕಲ್‌ ಪೊಲೀಸ್‌ ಠಾಣೆಯ ಪಿಐ ದೇವೀಂದ್ರಪ್ಪ ಡಿ.ದೂಳಖೇಡ ಹಾಗೂ ತಂಡ ಶಾಲೆಗೆ ಭೇಟಿ ನೀಡಿ ಕೆಲ ಕಾಲ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ.

‘ಪ್ರಕರಣದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ದೂರು ಬಂದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಪೊಲೀಸ್‌ ಠಾಣೆಯ ಸಿಬ್ಬಂದಿ ಹೇಳಿದರು.

ಆದರೆ, ಇನ್ನೂ ಪ್ರಕರಣದ ಖಚಿತತೆಯಿಲ್ಲ. ಆದರೆ, ಬಾಲಕಿಯರೊಂದಿಗೆ ಶಿಕ್ಷಕರು ಆಗಾಗ ಫೋಟೋ ತೆಗೆದುಕೊಂಡಿದ್ದಾರೆ. ಪಾಠ ಮಾಡುವಾಗ ದ್ವಂದ್ವರ್ಥ ಮಾತುಗಳಾಡಿದ್ದಾರೆ. ಈಗಾಗಲೇ ಪೋಷಕರು ಎಚ್ಚರಿಕೆ ನೀಡಿದ್ದರು. ಆದರೂ ಚಾಳಿ ಬಿಟ್ಟಿರಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸೋಮವಾರ ಸಂಜೆಯವರೆಗೂ ಶಾಲೆಗೆ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆದಿತ್ತು.

ಶಿಕ್ಷಕರಿಗೆ ನೋಟೀಸ್‌:

ಅಸಭ್ಯ ವರ್ತನೆಯ ಘಟನೆಗೆ ಸಂಬಂಧಿಸಿದಂತೆ 'ಶಾಲೆಯ ವಾರ್ಡನ್‌ ಮೀರನ್‌ ಅಲಿ ಮತ್ತು ಸಮಾಜ ವಿಜ್ಞಾನ ಶಿಕ್ಷಕ ಶಾಂತಪ್ಪ ಅವರಿಗೆ ನೋಟಿಸ್‌ ನೀಡಿದ್ದೇನೆ. ಅತಿಥಿ ಶಿಕ್ಷಕ ಅಂಬರೀಶ ಅವರನ್ನು ಸೇವೆಯಿಂದ ವಜಾಗೊಳಿಸಿದ್ದೇನೆ' ಎಂದು ಶಾಲೆಯ ಪ್ರಾಂಶುಪಾಲ ಅಕ್ಬರಲಿ ಪತ್ತಾರ್‌ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.