ADVERTISEMENT

ಅಂಗನವಾಡಿ ಕೇಂದ್ರಗಳಿಗೆ ದಿಢೀರ್‌ ಭೇಟಿ: ಚಿತ್ರಾನ್ನ ರುಚಿ ನೋಡಿದ ಸಿಇಒ

ಭೇಟಿ ನೀಡಿದ ಕವಿತಾ ಎಸ್‌. ಮನ್ನಿಕೇರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:02 IST
Last Updated 18 ಡಿಸೆಂಬರ್ 2018, 14:02 IST
ಯಾದಗಿರಿಯ ಮುಂಡರಗಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್. ಮನ್ನಿಕೇರಿ ಷಿತ್ರಾನ್ನ ಸವಿದು ಆಹಾರ ಗುಣಮಟ್ಟ ಪರಿಶೀಲಿಸಿದರು
ಯಾದಗಿರಿಯ ಮುಂಡರಗಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್. ಮನ್ನಿಕೇರಿ ಷಿತ್ರಾನ್ನ ಸವಿದು ಆಹಾರ ಗುಣಮಟ್ಟ ಪರಿಶೀಲಿಸಿದರು   

ಯಾದಗಿರಿ: ಜಿಲ್ಲೆಯ ಅರಕೇರಾ (ಬಿ) ಮತ್ತು ಮುಂಡರಗಿ ಗ್ರಾಮಗಳಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆಹಾರ, ನೀರು ಇತರೆ ಸೌಲಭ್ಯ ಪರಿಶೀಲಿಸಿದರು.

ಮುಂಡರಗಿ ಅಂಗನವಾಡಿ ಕೇಂದ್ರದಲ್ಲಿ ತಯಾರಿಸಲಾಗಿದ್ದ ಚಿತ್ರಾನ್ನದ ರುಚಿ ನೋಡಲು ಮಕ್ಕಳ ಸಾಲಿನಲ್ಲಿ ಕುಳಿತರು. ಇದರಿಂದ ಗಲಿಬಿಲಿಗೊಂಡ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಸಿಇಒ ಅವರಿಗೆ ಪ್ರತ್ಯೇಕ ಆಹಾರದ ಪೂರೈಕೆಗೆ ಮುಂದಾದರು. ಅದನ್ನು ತಿರಸ್ಕರಿಸಿದ ಸಿಇಒ ಮಕ್ಕಳು ತಿನ್ನುವ ಆಹಾರ ತರುವಂತೆ ಹೇಳಿ ಚಿತ್ರಾನ್ನದ ರುಚಿ ಸವಿದರು. ಕೇಂದ್ರದಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಮಕ್ಕಳಲ್ಲಿ ಕೇಳಿ ತಿಳಿದುಕೊಂಡರು.

ನಂತರ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಕುರಿತು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸೂಚನೆ ನೀಡಿದರರು. ಶುದ್ಧೀಕರಣ ಘಟಕ ಇಲ್ಲದಿದ್ದರೆ ಇರುವ ನೀರನ್ನೇ ಚೆನ್ನಾಗಿ ಕುದಿಸಿ ಆರಿಸಿ ಮಕ್ಕಳಿಗೆ ನೀಡಬೇಕು. ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಜಾಗ್ರತೆ ವಹಿಸುವಂತೆ ಅವರು ಸಲಹೆ ನೀಡಿದರು.

ADVERTISEMENT

ನಂತರ ಮಕ್ಕಳೊಂದಿಗೆ ಒಂದಷ್ಟು ಕೌಶಲ ಆಟಗಳನ್ನು ಆಡಿ ಮಕ್ಕಳ ಕಲಿಕಾ ಸಾಮರ್ಥ್ಯ, ಕೌಶಲ ತಿಳಿದರು. ನಂತರ ಮಾತೃಪೂರ್ಣ ಯೋಜನೆಯಡಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಉಣಬಡಿಸಿದರು. ಗರ್ಭಾವಸ್ಥೆಯಲಲಿಯೇ ಮಕ್ಕಳು ದಷ್ಟಪುಷ್ಟವಾಗಲು ಮತ್ತು ಅನೇಕ ರೋಗಗಳಿಂದ ಮುಕ್ತವಾಗಲು ಪೌಷ್ಟಿಕ ಆಹಾರ ಸೇವನೆ ಅಗತ್ಯ ಎಂಬುದಾಗಿ ತಿಳಿವಳಿಕೆ ನೀಡಿದರು.

ಅಂಗನವಾಡಿ ಅಡುಗೆ ಕೇಂದ್ರದ ಸುರಕ್ಷತೆ, ಕೇಂದ್ರದ ಸುತ್ತಲೂ ಕಾಂಪೌಂಡ್ ನಿರ್ಮಾಣ ಕುರಿತು ಅವರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಅವರೊಂದಿಗೆ ಸಮಾಲೋಚಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಮಣ್ಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.