ADVERTISEMENT

ಗುರುಮಠಕಲ್: ಅಂಗನವಾಡಿ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ

ತಿಪ್ಪೆಗುಂಡಿಯಾದ ಕಟ್ಟಡದ ಆವರಣ; ಕುಸಿದು ಬೀಳುವ ಹಂತದಲ್ಲಿರುವ ಮೇಲ್ಚಾವಣಿ

ಎಂ.ಪಿ.ಚಪೆಟ್ಲಾ
Published 27 ಜುಲೈ 2021, 3:40 IST
Last Updated 27 ಜುಲೈ 2021, 3:40 IST
ರಾಂಪುರ(ಜಿ) ಗ್ರಾಮದ ಅಂಗನವಾಡಿ ಕೇಂದ್ರದ ಸುತ್ತ ತ್ಯಾಜ್ಯ ಸುರಿಯಲಾಗಿದೆ
ರಾಂಪುರ(ಜಿ) ಗ್ರಾಮದ ಅಂಗನವಾಡಿ ಕೇಂದ್ರದ ಸುತ್ತ ತ್ಯಾಜ್ಯ ಸುರಿಯಲಾಗಿದೆ   

ಗುರುಮಠಕಲ್: ಮಕ್ಕಳಿಗೆ ಪೌಷ್ಟಿಕ ಆಹಾರ, ಪ್ರಾಥಮಿಕ ಶಿಕ್ಷಣ ಹಾಗೂ ಶಿಸ್ತನ್ನು ಕಲಿಸಿಕೊಡಬೇಕಿದ್ದ ತಾಲ್ಲೂಕಿನ ರಾಂಪುರ (ಜಿ) ಗ್ರಾಮದ ಅಂಗನವಾಡಿ ಕೇಂದ್ರವೀಗ ತಿಪ್ಪೆಗುಂಡಿಯಾಗಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಸಣ್ಣ ಮಳೆಬಂದರೂ ಮೇಲ್ಛಾವಣಿ ಸೋರುತ್ತದೆ. ಇದರಿಂದ ಮಕ್ಕಳಿಗಾಗಿ ಸಂಗ್ರಹಿಸಿಟ್ಟ ಆಟಿಕೆ, ಆಹಾರ ಪದಾರ್ಥ ಹಾಗೂ ಕಾಗದ ಪತ್ರಗಳು ತೋಯ್ದು ಹೋಗುತ್ತವೆ. ಇದರಿಂದ ಸರ್ಕಾರ ಖರ್ಚು ಮಾಡಿದ ಅನುದಾನ ಮಕ್ಕಳಿಗೆ ತಲುಪದ ಸ್ಥಿತಿಯಿದೆ. ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ವ್ಯರ್ಥವಾಗುತ್ತಿರುವುದು ನೋವಿನ ಸಂಗತಿ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸತತ ಮಳೆ ಸುರಿಯುತ್ತಿದ್ದರಿಂದ ಈ ತಿಂಗಳು ನೀಡಬೇಕಿದ್ದ ಪೌಷ್ಟಿಕ ಆಹಾರವನ್ನು ಕೇಂದ್ರ-1ರ ಮೂಲಕ ವಿತರಣೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅನಾಹುತಗಳು ಆಗುವುದಕ್ಕೂ ಮುನ್ನವೇ ಎಚ್ಚೆತ್ತುಕೊಂಡರೆ ಚೆನ್ನ ಎಂದು ಮಾರುತಿ ಮನವಿ ಮಾಡಿದರು.

ADVERTISEMENT

ಕೇಂದ್ರದ ಮುಂದೆ ತಿಪ್ಪೆಗುಂಡಿ, ಕಳೆ-ಪೊದೆಗಳು ಬೆಳೆದಿದ್ದು, ದುರ್ವಾಸನೆ ಹಾಗೂ ಸೊಳ್ಳೆಗಳಿಂದಲೇ ಮಕ್ಕಳು ಅನಾರೋಗ್ಯಕ್ಕೀಡಾಗುವ ಸಾಧ್ಯತೆಯಿದೆ. ಮಳೆ ನಿಂತಮೇಲೂ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಭಯಪಡುವಂತಾಗಿದೆ ಎಂದು ಮಹಿಳೆಯರು ತಮ್ಮ ಭೀತಿಯನ್ನು ವ್ಯಕ್ತಪಡಿಸಿದರು.

ಸದ್ಯ ಇಲಾಖೆಯ ಪೌಷ್ಟಿಕ ಆಹಾರವನ್ನು ಕೋವಿಡ್ ಕಾರಣದಿಂದ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ರಾಂಪುರ(ಜಿ) ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ-2ರಲ್ಲಿ ಸಮಸ್ಯೆಯಾಗಿರುವ ಕುರಿತು ನಾನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ. ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***
ಅಂಗನವಾಡಿ ಕೇಂದ್ರದ ಸಮಸ್ಯೆಯ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೆ ಅದನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು
-ಭೀಮರಾಯ, ಸಿಡಿಪಿಒ, ಗುರುಮಠಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.