ADVERTISEMENT

ಜನವರಿ 6ರಂದು ಸಿ.ಎಂ ಆಗಮನ; ಸಿದ್ಧತೆ ಜೋರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 16:56 IST
Last Updated 4 ಜನವರಿ 2021, 16:56 IST
ಯಾದಗಿರಿ ನಗರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸ್ಥಳ ಪರಿಶೀಲನೆ ನಡೆಸಿದರು
ಯಾದಗಿರಿ ನಗರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸ್ಥಳ ಪರಿಶೀಲನೆ ನಡೆಸಿದರು   

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ (ಜ.6) ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲು ಆಗಮಿಸುತ್ತಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಬುಧವಾರ ಮಧ್ಯಾಹ್ನ 2.30ಕ್ಕೆ ಯಾದಗಿರಿ ತಾಲ್ಲೂಕಿನ ಮುದ್ನಾಳ ಗ್ರಾಮದಲ್ಲಿರುವ ನೂತನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮುಖ್ಯಮಂತ್ರಿ ₹56 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆ, ₹17.66 ಕೋಟಿ ವೆಚ್ಚದಲ್ಲಿ ವರ್ಕನಳ್ಳಿಯಲ್ಲಿ ನಿರ್ಮಾಣಗೊಂಡಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ₹3.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಯಾದಗಿರಿ ನಗರದಲ್ಲಿ ನೂತನ ನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ವಿಭಾಗೀಯ ಕಚೇರಿ ಉದ್ಘಾಟಿಸುವರು.

ADVERTISEMENT

₹1.35 ಕೋಟಿ ವೆಚ್ಚದ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು, ₹1.25 ಕೋಟಿ ವೆಚ್ಚದಲ್ಲಿ ವಡಗೇರಾ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಗೆ ಹೆಚ್ಚುವರಿ 10 ಕೋಣೆಗಳ ನಿರ್ಮಾಣ, 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಟ್ಟಡ, ₹50 ಲಕ್ಷ ವೆಚ್ಚದಲ್ಲಿ ಯಾದಗಿರಿ ನಗರದ ಮುರುಘೇಂದ್ರ ಮಠದ ಹತ್ತಿರ ಯಾತ್ರಿಕ ನಿವಾಸ ಕಟ್ಟಡ ಹಾಗೂ ₹50 ಲಕ್ಷ ವೆಚ್ಚದ ವಡಗೇರಾ ತಾಲ್ಲೂಕಿನ ಸಂಗಮನಾಥ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ
ತಿಳಿಸಿದರು.

₹325 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಯಾದಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆ, ₹63.31 ಕೋಟಿ ವೆಚ್ಚದಲ್ಲಿ ರಾಮಸಮುದ್ರದಲ್ಲಿ 220/110/11 ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರದ ಸ್ಥಾಪನೆ, ₹24.75 ಕೋಟಿ ವೆಚ್ಚದಲ್ಲಿ ಕಾಡಂಗೇರಾದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ (ಪರಿಶಿಷ್ಟ ಜಾತಿ), ₹19.90 ಕೋಟಿ ವೆಚ್ಚದಲ್ಲಿ ಯಾದಗಿರಿ ನಗರದಲ್ಲಿ ಭೀಮಾ ನದಿ ಹತ್ತಿರ ಜ್ಯಾಕ್‍ವೆಲ್ ನಿರ್ಮಾಣ, ₹6 ಕೋಟಿ ವೆಚ್ಚದಲ್ಲಿ ಕೊಳ್ಳೂರು (ಎಂ) ಗ್ರಾಮದಲ್ಲಿ 110/11 ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ, ₹4.80 ಕೋಟಿ ವೆಚ್ಚದಲ್ಲಿ ವಡಗೇರಾ- ತುಮಕೂರು ಸಂಗಮ್ ರಸ್ತೆಯ ಅಭಿವೃದ್ಧಿ (ಕಿ.ಮೀ 27ರಿಂದ 33ರವರೆಗೆ), ₹4 ಕೋಟಿ ವೆಚ್ಚದಲ್ಲಿ ಯಾದಗಿರಿ ನಗರದ ವಿವಿಧ ವಾರ್ಡ್‍ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ
ನೀಡುವರು ಎಂದು
ತಿಳಿಸಿದರು.

₹2.08 ಕೋಟಿ ವೆಚ್ಚದಲ್ಲಿ ಯಾದಗಿರಿ ನಗರದ ಶಾಸ್ತ್ರಿ ವೃತ್ತದ ಸೌಂದರ್ಯಕರಣ ಮತ್ತು ಶಾಸ್ತ್ರಿ ವೃತ್ತದಿಂದ ದೊಡ್ಡ ಹಳ್ಳದವರೆಗೆ ಚರಂಡಿ ನಿರ್ಮಾಣ, ₹2 ಕೋಟಿ ವೆಚ್ಚದಲ್ಲಿ ಶಹಾಪುರ ತಾಲ್ಲೂಕಿನ ವಡಗೇರಾ- ತುಮಕೂರು ಸಂಗಮ್ ರಸ್ತೆ (ಕಿ.ಮೀ 18.80 ರಿಂದ 21.30 ರವರೆಗೆ ಸುಧಾರಣೆ), ₹2 ಕೋಟಿ ವೆಚ್ಚದಲ್ಲಿ ವಡಗೇರಾ- ತುಮಕೂರು ಸಂಗಮ್ ರಸ್ತೆ (ಕಿ.ಮೀ 21.30 ರಿಂದ 23.80 ರವರೆಗೆ ಸುಧಾರಣೆ) ಹಾಗೂ ₹1 ಕೋಟಿ ವೆಚ್ಚದಲ್ಲಿ ಯಾದಗಿರಿ ನಗರದಲ್ಲಿ ಮೀನು ಮಾರುಕಟ್ಟೆ ಸ್ಥಾಪನೆ ಸೇರಿದಂತೆ ಒಟ್ಟಾರೆ ಅಂದಾಜು ₹536.91 ಕೋಟಿ ವೆಚ್ಚದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸುವರು ಎಂದು ಹೇಳಿದರು.

ಕಾರ್ಯಕ್ರಮ ನಡೆಯವ ಸ್ಥಳದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಕಾರ್ಯಕ್ರಮ ನಡೆಯುವ ದಿನ ಆಗಮಿಸುವವರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಅಂತರ ಕಾಯ್ದುಕೊಳ್ಳಲು ಸಲಹೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದುಮತಿ ಪಾಟೀಲ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು
ಇದ್ದರು.

***

ಶಂಕುಸ್ಥಾಪನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಯಾವುದೇ ಲೋಪದೋಷಗಳಾಗದಂತೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು

- ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.