ADVERTISEMENT

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಪೋರ್ಟಲ್ ಮೂಲಕ ಪ್ರೋತ್ಸಾಹಧನ ನೀಡುವುದನ್ನು ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:38 IST
Last Updated 29 ಡಿಸೆಂಬರ್ 2022, 4:38 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು   

ಯಾದಗಿರಿ: ಆರ್‌ಸಿಎಚ್ ಪೋರ್ಟಲ್ ಮೂಲಕ ಪ್ರೋತ್ಸಾಹಧನ ನೀಡುವುದನ್ನು ರದ್ದುಪಡಿಸಬೇಕು. ಮಾಸಿಕ ಗೌರವಧನ ₹12 ಸಾವಿರ ನಿಗದಿ ಪಡಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಉಮಾದೇವಿ,‘ಆರ್‌ಸಿಎಚ್ (ಆಶಾ ನಿಧಿ) ಪೋರ್ಟಲ್‌ನಲ್ಲಿ ಇರುವ ಸಮಸ್ಯೆಗಳ ಕಾರಣಕ್ಕೆ ಮಾಡಿದ ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ. ಈ ಸಂಬಂಧ ಪುರಾವೆಗಳ ಸಹಿತ ಹಲವಾರು ವರ್ಷಗಳಿಂದ ಸರ್ಕಾರ, ಇಲಾಖೆಗೆ ಪದೇ ಪದೇ ದೂರು ನೀಡಲಾಗಿದೆ’ ಎಂದು ಹೇಳಿದರು.

ರಾಜ್ಯ ಘಟಕದ ಪದಾಧಿಕಾರಿಗಳೊಂದಿಗೆ ಉನ್ನತ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸಮಸ್ಯೆಯನ್ನು ಗುರುತಿಸಿದ ಮೇಲೆ ಭರವಸೆ ನೀಡಿದಂತೆ 2022ರ ಡಿಸೆಂಬರ್ ನಂತರ ಆರ್‌ಸಿಎಚ್ ಪೋರ್ಟಲ್‌ನಿಂದ ಪ್ರೋತ್ಸಾಹಧನ ಪಾವತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ₹5,000, ನಿಗದಿತ ಚಟುವಟಿಕೆಗಳ ನಿಶ್ಚಿತ ಗೌರವಧನ ₹2,000 ಮತ್ತು ಆಶಾ ನಿಧಿಯ ಮೂಲಕ ಪಡೆಯುವ ಚಟುವಟಿಕೆಗಳ ಪ್ರೋತ್ಸಾಹಧನ ₹5,000 ಒಟ್ಟು ಗೂಡಿಸಿ ಒಂದೇ ಗೌರವಧನ ನಿಗದಿ ಮಾಡಿ ಪ್ರತಿ ತಿಂಗಳು ₹12,000 ಪಾವತಿಸಬೇಕು ಎಂದು ಒತ್ತಾಯಿಸಿದರು.

8 ತಿಂಗಳಿಂದ ಸಂಘದ ಪದಾಧಿಕಾರಿಗಳೊಂದಿಗೆ ಆರೋಗ್ಯ ಸಚಿವ, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ 5 ಸಭೆಗಳ ನ್ನು ನಡೆಸಲಾಗಿದೆ. ಕೆಲವು ಬೇಡಿಕೆಗಳಿಗೆ ಆರೋಗ್ಯ ಇಲಾಖೆ ಸ್ಪಂದಿಸಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ. ಹೀಗೆ ನಿಷ್ಕಾಳಜಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ನಗರ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ. ಆದ್ದರಿಂದ ಅವರ ಗೌರವಧನವನ್ನು ಹೆಚ್ಚಿಗೆ ಮಾಡಿ ಸರ್ಕಾರದಿಂದ ಆದೇಶ ಮಾಡಬೇಕು.ಸೇವಾ ನಿವೃತ್ತಿ/ಸೇವಾ ಅವಧಿಯಲ್ಲಿ ಸ್ವಯಂ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಈಗಿರುವ ₹20,000 ಇಡುಗಂಟನ್ನು, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ₹3 ಲಕ್ಷಕ್ಕೆ ಹೆಚ್ಚಿಸಬೇಕು ಎಂದರು.

‘ಆಶಾ ಕ್ಷೇಮಾಭಿವೃದ್ದಿ ನಿಧಿ’ ಸ್ಥಾಪಿಸಿ, ತೀವ್ರ ಆರೋಗ್ಯ ತೊಂದರೆಗೊಳಗಾದ ಆಶಾಗಳಿಗೆ ಅನಾರೋಗ್ಯಕ್ಕೆ ಅನುಗುಣವಾಗಿ ಪರಿಹಾರ ಒದಗಿಸಬೇಕು. ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಾವನ್ನಪ್ಪಿದರೆ, ಅವರ ಕೆಲಸವನ್ನು ಕುಟುಂಬ ಸದಸ್ಯರಿಗೆ ನೀಡಬೇಕು ಎಂದರು.

ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಸಂಘದ ಜಿಲ್ಲಾ ಕಾರ್ಯದರ್ಶಿ ದೇವಕ್ಕಿ, ಅಮೃತ, ದಾನಮ್ಮ, ಸರಸ್ವತಿ, ಪುಷ್ಪಲತಾ, ಶಾಂತವ್ವ, ಅಶ್ವಿನಿ, ನೀಲಮ್ಮ, ನಿಂಗಮ್ಮ, ಮಹಾದೇವಿ, ರೇಣುಕಾ, ಗಂಗಮ್ಮ, ಸುಭದ್ರಮ್ಮ, ಶಿವಮೊಗ್ಗಮ್ಮ, ಸುಧಾ ಹಾಗೂ ಪ್ರಮಿಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.