
ಶಹಾಪುರ: ನಗರದ ಕನ್ಯಾಕೊಳ್ಳೂರ ರಸ್ತೆಯ ಹತ್ತಿರದ ನೂತನ ಆಶ್ರಯ ಲೇಔಟ್‌ನಲ್ಲಿ ಸೂರು ವಂಚಿತ ಗಿಸಾಡಿ ಹಾಗೂ ಕುಂಬಾರ ಸಮಾಜ ಸೇರಿದಂತೆ ಇನ್ನುಳಿದ ಸಮಾಜದ ಫಲಾನುಭವಿಗಳಿಗೆ ನೀಡಿದ್ದ ನಿವೇಶನದಲ್ಲಿ ಫಲಾನುಭವಿಗಳು ಶೆಡ್ ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ನೂತವಾಗಿ ನಾಮಕರಣಗೊಳಿಸಿದ ‘ಗಾಂಧಿ ನಗರ’ ಬಡಾವಣೆಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಕಳೆದ ನ.29 ರಂದು 64 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದೇವು. ಅದರಲ್ಲಿ ಈಗಾಗಲೇ 44 ಫಲಾನುಭವಿಗಳು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇನ್ನುಳಿದ ಫಲಾನುಭವಿಗಳು ತ್ವರಿತವಾಗಿ ಗೂಡುಕಟ್ಟಿಕೊಳ್ಳುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ನೂತನವಾಗಿ ನಾಮಕರಣಗೊಂಡಿರುವ ಗಾಂಧಿನಗರ ಬಡಾವಣೆಗೆ ಕುಡಿಯುವ ನೀರು, ವಿದ್ಯುತ್ ಕಾಮಗಾರಿ ಹಾಗೂ ರಸ್ತೆ ಕಾಮಗಾರಿ ನಿರ್ಮಿಸಿದೆ. ನಿಜವಾದ ಫಲಾನುಭವಿಗಳು ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿರುವುದು ಸಮಧಾನ ತಂದಿದೆ’ ಎಂದರು.
ಇದೇ ವೇಳೆ ಅಂಗವೀಕಲ ಹೆಣ್ಣುಮಗಳಿಗೆ ಸ್ವಂತ ದುಡ್ಡಿನಿಂದ ಶೆಡ್ ನಿರ್ಮಿಸಿ ಕೊಟ್ಟ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಕಾರ್ಯದ ಕುರಿತು ಶ್ಲಾಘಿಸಿದರು
‘ಅಲ್ಲದೆ ನಗರದ 31 ವಾರ್ಡ್‌ಗಳಲ್ಲಿ 500 ವಿದ್ಯುತ್ ಕಂಬಗಳನ್ನು ಅಳವಡಿಸಲು 2024-25 ಸಾಲಿನ ಕೆಕೆಆರ್ ಡಿ ಅಡಿಯಲ್ಲಿ ₹ 1.40 ಕೋಟಿ ಅನುದಾನ ಬಂದಿದೆ. ಅಜಾದ ಮೌಲಾನ ಶಾಲಾ ಕಟ್ಟಡ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದೇ ಜಾಗದ ಪಕ್ಕದಲ್ಲಿ ಸ್ಲಂ ಬೋರ್ಡ್ ಅಡಿಯಲ್ಲಿ ಜಿ ಗೆಟಗೆರಿಯಲ್ಲಿ ₹ 12.78ಕೋಟಿ ವೆಚ್ಚದಲ್ಲಿ ನಿರ್ಮಿಸಿದ 200 ಮನೆಗಳ ಫಲಾನುಭಭವಿಗಳ ಪಟ್ಟಿ ಸಿದ್ಧವಾಗಿದೆ. ಅನುಮೋದನೆ ಪಡೆದ ತಕ್ಷಣವೇ ಹಂಚಿಕೆ ಮಾಡಲಾಗುವುದು. ಅದರಂತೆ ಮಲ್ಲಯ್ಯ ಮಡ್ಡಿಯಲ್ಲಿ ಸಿದ್ಧಗೊಂಡಿರುವ 384 ನಿವೇಶನಗಳನ್ನು ಇನ್ನೆರಡು ತಿಂಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು’ ಎಂದರು.
ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರುಪುರಕರ್, ಎಂಜಿನಿಯರ್ ನಾನಾಸಾಹೇಬ ಮಡಿವಾಳಕರ್, ಹರೀಶ ಸಜ್ಜನಶೆಟ್ಟಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಶಿವಮಹಾಂತ ಚಂದಾಪುರ, ಸಲೀಂ ಸಂಗ್ರಾಮ, ರವಿ ಧಣಿ ಹಳಿಸಗರ, ಸಣ್ಣ ಮಾನಯ್ಯ ಹಾದಿಮನಿ, ಶಾಂತಪ್ಪ ಗುತ್ತೆದಾರ, ಮಹಾದೇಪ್ಪಗೌಡ, ನಿಂಗಣ್ಣ ರಾಕಂಗೇರಿ, ಅಯ್ಯಣ್ಣ ನಾಲ್ವಡಿಗಿ, ಕಾಶಪ್ಪ ಗಂಗಾನಗರ ಭಾಗವಹಿಸಿದ್ದರು.
ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಸ್ಥಳಾಂತರ
ಶಹಾಪುರ: ‘ನಗರದ ಹಳೆ ತಹಶೀಲ್ದಾರ್ ಜಾಗದಲ್ಲಿ ಹಿಂದೆ ನಿರ್ಮಿಸಲು ಉದ್ದೇಶಿಸಿದ್ದ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಖಾಲಿ ಇರುವ 25 ಗುಂಟೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುವುದು’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
‘ಈಗಾಗಲೇ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಅಡಿಯಲ್ಲಿ ₹ 17 ಕೋಟಿ ಅನುದಾನ ಬಂದಿದೆ. ಆರೋಗ್ಯ ಇಲಾಖೆಯು ತಾಂತ್ರಿಕ ಕಾರಣ ತಿಳಿಸಿದ್ದು ಆಸ್ಪತ್ರೆಗೆ ಹೊಂದಿಕೊಂಡು ಪ್ರದೇಶದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಸೂಚಿಸಿದ್ದರಿಂದ ಹಳೆ ತಹಶೀಲ್ ಜಾಗದಲ್ಲಿ ಕಟ್ಟಡ ನಿರ್ಮಾಣ ಕೈ ಬಿಟ್ಟು ಸರ್ಕಾರಿ ಆಸ್ಪತ್ರೆಯ ಜಾಗದಲ್ಲಿ ನಿರ್ಮಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮೊದಲು ಹಳೆ ತಹಶೀಲ್ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.