ADVERTISEMENT

ಬೆಳೆ ಹಾನಿ ವರದಿ ಸಲ್ಲಿಕೆಗೆ ಅಧಿಕಾರಿಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:23 IST
Last Updated 8 ಏಪ್ರಿಲ್ 2020, 16:23 IST
ಆರ್.ದೇವಿಕಾ
ಆರ್.ದೇವಿಕಾ   

ಯಾದಗಿರಿ: ಜಿಲ್ಲೆಯಲ್ಲಿ ಏಪ್ರಿಲ್ 7ರಂದು ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾದ ಜಂಟಿ ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಬೆಳೆಯಲಾದ ಭತ್ತ ಹಾಗೂ ಇತರೆ ಬೆಳೆಗಳು ಹಾನಿಯಾಗಿರುವುದು ಕಂಡುಬಂದಿರುತ್ತದೆ. ಏಪ್ರಿಲ್ 8ರಂದು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ರೈತ ಮುಖಂಡರಿಂದ ಹಾಗೂ ಶಾಸಕರಿಂದ ಬೆಳೆ ಹಾನಿ ಆಗಿರುವುದಾಗಿ ಸುದೀರ್ಘವಾಗಿ ಚರ್ಚಿಸಲಾಗಿದೆ.

ಶಹಾಪುರ ತಾಲ್ಲೂಕಿನ ಹೈಯಾಳ ಹೋಬಳಿಯ ಐಕೂರ, ಅನಕಸೂಗೂರು, ಕ್ಯಾತ್ನಾಳ, ಯಕ್ಷಿಂತಿ ಗ್ರಾಮಗಳು, ವಡಗೇರಾ ಹೋಬಳಿಯ ಕೊಂಕಲ್, ಕುರಿಹಾಳ, ತುಮಕೂರು, ಇಟಗಾ, ರೊಟ್ನಡಗಿ, ದೋರನಳ್ಳಿ ಹೋಬಳಿಯ ಬೀರನ್ಹಾಳ, ಗುಲಸರಂ, ನಾಯ್ಕಲ್, ಸುರಪುರ ತಾಲ್ಲೂಕಿನ ಕೊಡೇಕಲ್ಲ ಹೋಬಳಿಯ ಕುಪ್ಪಿ, ಗುಳಬಾಳ, ಬೊಮ್ಮಗುಡ್ಡ, ದ್ಯಾಮನಾಳ, ಕಡದರಾಳ, ರಾಜನಾಳ, ಗೆದ್ದಲಮರಿ, ಜುಮಾಲಪುರ, ಮಾಳನೂರು, ಕೊಡೇಕಲ್ಲ, ಹನುಮಸಾಗರ, ಬೈಲಕುಂಟಿ ಗ್ರಾಮಗಳು, ಕಕ್ಕೇರಾ ಹೋಬಳಿಯ ಹೆಬ್ಬಾಳ ಬಿ., ತೋಳದಿನ್ನಿ, ಹುಣಸಗಿ ಹೋಬಳಿಯ ಕಾಮನಟಗಿ ಗ್ರಾಮದಲ್ಲಿ ಬೆಳೆ ಹಾನಿಯಾಗಿರುವುದು ವರದಿಯಾಗಿವೆ.

ADVERTISEMENT

ಯಾದಗಿರಿ ತಾಲ್ಲೂಕಿನ ಬಳಿಚಕ್ರ ಹೋಬಳಿಯ ಕೌಳೂರು, ಕೊಂಕಲ್ ಹೋಬಳಿಯ ಜೈಗ್ರಾಮ, ಕರಣಗಿ ಗ್ರಾಮಗಳಲ್ಲಿ ಬೆಳೆಯಲಾದ ಭತ್ತ ಹಾಗೂ ಇತರೆ ಬೆಳೆಗಳ ಹಾನಿಯನ್ನು ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಂದ ಆದೇಶಿಸಲಾಗಿದೆ. ಮೇಲಿನ ಗ್ರಾಮಗಳ ಹೊರತಾಗಿ ಇತರೆ ಗ್ರಾಮಗಳಲ್ಲಿಯೂ ಬೆಳೆ ಹಾನಿಯಾದಲ್ಲಿ ರೈತರು ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿ ಸಮೀಕ್ಷೆಯಲ್ಲಿ ಬೆಳೆ ಹಾನಿಯಾದ ಗ್ರಾಮಗಳಲ್ಲಿ ಸಮೀಕ್ಷೆ ಮಾಡಲು ಕೋರಬಹುದಾಗಿದೆ.

ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಬೆಳೆ ಸಮೀಕ್ಷೆ ವರದಿಯನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇಸಿಗೆ ಹಂಗಾಮಿನ ಬೆಳೆ ವಿಮಾ ಪಾವತಿಸಿ ಬೆಳೆ ಹಾನಿಯಾದಲ್ಲಿ ಫ್ಯೂಚರ್ ಜನರಲ್ ಇನ್ಸೂರನ್ಸ್ ಕಂಪನಿ ಪ್ರತಿನಿಧಿ ನಿಂಗಯ್ಯ ಮೊ:9008258062 ಇವರಿಗೆ 48 ಗಂಟೆಯ ಒಳಗಾಗಿ ಸೂಚಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.