ADVERTISEMENT

ಜಟಾಪಟಿ: ಸಂಚಾರ ನಿಯಂತ್ರಣಾಧಿಕಾರಿ ಅಪಹರಣ ಯತ್ನ

ಕರ್ನಾಟಕ- ತೆಲಂಗಾಣ ಸಾರಿಗೆ ಸಿಬ್ಬಂದಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 4:49 IST
Last Updated 9 ಜನವರಿ 2021, 4:49 IST
ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಾಧಿಕಾರಿ ಜೊತೆ ತೆಲಂಗಾಣ ಸಾರಿಗೆ ಸಿಬ್ಬಂದಿ ವಾಗ್ವಾದ ನಡೆಸಿದರು
ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಾಧಿಕಾರಿ ಜೊತೆ ತೆಲಂಗಾಣ ಸಾರಿಗೆ ಸಿಬ್ಬಂದಿ ವಾಗ್ವಾದ ನಡೆಸಿದರು   

ಗುರುಮಠಕಲ್:ಕರ್ನಾಟಕ-ತೆಲಂಗಾಣ ಸಾರಿಗೆ ಸಿಬ್ಬಂದಿ ನಡುವೆ ಶುಕ್ರವಾರಬೆಳಿಗ್ಗೆಇಲ್ಲಿ ನಡೆದ ಜಟಾಪಟಿ ವೇಳೆ ಸಂಚಾರ ನಿಯಂತ್ರಣಾಧಿಕಾರಿಯನ್ನು ಅಪಹರಿಸುವ ಯತ್ನ ನಡೆದಿದೆ.

ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್‌ಗೆ ಹೋಗಬೇಕಿದ್ದ ತೆಲಂಗಾಣ ರಾಜ್ಯದ ಪರಗಿ ಘಟಕದ ಬಸ್‌ ನಿಗದಿತ ಸಮಯಕ್ಕಿಂತ ಮುಂಚೆಯೇ ಬಂದಿದೆ. ಅಲ್ಲದೆ ಆ ಬಸ್‌ನ ನಿರ್ವಾಹಕ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಕರೆದಿದ್ದಾರೆ. ಅದನ್ನು ಪ್ರಶ್ನಿಸಿದ ಕಾರಣಕ್ಕೆ ಸಂಚಾರ ನಿಯಂತ್ರಣಾಧಿಕಾರಿಯನ್ನು ಅಪಹರಿಸಲು ಯತ್ನಿಸಿದ್ದಾರೆ.

ಕರ್ತವ್ಯದಲ್ಲಿದ್ದ ಸಂಚಾರ ನಿಯಂತ್ರಣಾಧಿಕಾರಿ ಮಧುಸೂದನ ಅವರು ‘ನಿಗದಿತ ಅವಧಿಗೂ ಮೊದಲೇ ಬಂದು ನಮ್ಮ ಸಂಸ್ಥೆಯ ವಾಹನದಲ್ಲಿದ್ದ ಪ್ರಯಾಣಿಕರನ್ನು ಏಕೆ ಕರೆಯುತ್ತೀರಿ, ನಿಮ್ಮ ಬಸ್ ಹೊರಡುವ ಸಮಯದಲ್ಲಿ ಬೇಕಾದರೆ ಪ್ರಯಾಣಿಕರನ್ನು ಕರೆಯಬೇಕು. ಈ ರೀತಿ ಏಕೆ ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಮಧುಸೂದನ ಅವರೊಡನೆ ವಾಗ್ವಾದಕ್ಕಿಳಿದ ತೆಲಂಗಾಣ ಸಾರಿಗೆ ಸಂಸ್ಥೆಯ ಸಿಬ್ಬಂದಿ ‘ನಿಮ್ಮ ಬಸ್‌ಗಳು ನಮ್ಮ ರಾಜ್ಯದಲ್ಲಿ ಹೇಗೆ ಓಡಾಡುತ್ತವೆಯೋ ನೋಡುತ್ತೇವೆ’ ಎಂದು ಬೆದರಿಸಿದ್ದಾರೆ. ಜಟಾಪಟಿ ವೇಳೆ ಬಸ್‌ ಹತ್ತಿದ್ದ ಮಧುಸೂದನ ಅವರನ್ನು ಕೆಳಗಿಳಿಯಲು ಬಿಡದೆ ತೆಲಂಗಾಣ ಬಸ್‌ನ ನಿರ್ವಾಹಕ ಅಡ್ಡಗಟ್ಟಿದ್ದಾನೆ. ಚಾಲಕ ವೇಗವಾಗಿ ಬಸ್‌ ಚಲಾಯಿಸಿದ್ದಾನೆ.

ಬಸ್ ನಿಲ್ದಾಣದಿಂದ ಹೊರ ಬಂದ ಬಸ್ ಇನ್ನೇನು ಪಟ್ಟಣದ ಹೊರವಲಯಕ್ಕೆ ಹೋಗುವಷ್ಟರಲ್ಲಿ ರಸ್ತೆಯಲ್ಲಿ ಬಿಡಾಡಿ ದನಗಳು ಅಡ್ಡ ಬಂದಿವೆ. ಹೀಗಾಗಿ ಬಸ್‌ ನಿಲ್ಲಿಸಿದ್ದಾರೆ. ಕೂಡಲೇ ಬಸ್‌ ಹಿಂಬಾಲಿಸಿ ಬಂದಿದ್ದ ಗುರುಮಠಕಲ್ ಘಟಕದ ಸಿಬ್ಬಂದಿ ಮಧುಸೂದನ್ ಅವರನ್ನು ಬಸ್‌ನಿಂದ ಕೆಳಗಿಳಿಸಿಕೊಂಡು, ಬಸ್ಸನ್ನು ಮತ್ತೆ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ. ಪರಗಿ ಘಟಕದ ಹಿರಿಯ ಅಧಿಕಾರಿಗಳು ಕರೆ ಮಾಡಿ ಸಮಯ ಬದಲಾವಣೆ ಹಾಗೂ ಘಟನೆ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದಾಗ ಬಸ್‌ ತೆರಳಲು ಇಲ್ಲಿನ ಸಿಬ್ಬಂದಿ ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.