ಯಾದಗಿರಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ನ್ಯಾಯಾಲಯದಲ್ಲೇ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ್ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಆರೋಪಿ ವಿರುದ್ಧ ಘೋಷಣೆ ಕೂಗಿದರು. ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನಿಸುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಶೋರ್ ಎಂಬಾತ ಶೂ ಎಸೆಯಲು ಯತ್ನಿಸಿ ದೇಶ ದ್ರೋಹದ ಕೃತ್ಯ ಎಸಗಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲೆ ಎಸಗಿರುವ ಘೋರ ಹಾಗೂ ಅಕ್ಷಮ್ಯ ಅಪರಾಧವಾಗಿದೆ. ದೇಶದ 146 ಕೋಟಿ ಜನರ ಮೇಲೆ ಮಾಡಿದ ಪೈಶಾಚಿಕ ಕೃತ್ಯವಿದು. ಇಂತಹ ದೇಶ ದ್ರೋಹಿಯನ್ನು ಗಲ್ಲಿಗೆ ಹಾಕುವ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಅಪಚಾರ ಮತ್ತು ಅವಮಾನಕ್ಕೆ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದರು.
ಕೃತ್ಯ ಎಸಗಿರುವ ವ್ಯಕ್ತಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಆತನ ಹಿಂದಿರುವ ಕೊಳಕು ಮನಸ್ಥಿತಿಯವರಿಗೂ ಕಠಿಣ ಶಿಕ್ಷೆಯಾಗಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತಹ ಕಾನೂನು ತರಬೇಕು ಎಂದು ಮನವಿ ಮಾಡಿದರು.
ಸಮಿತಿಯ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ, ‘ಆರೋಪಿಯನ್ನು ಇಷ್ಟೊತ್ತಿಗೆ ಬಂಧಿಸಿ, ಆತನನ್ನು ಗಡಿಪಾರು ಮಾಡುವ ಕೆಲಸ ಆಗಬೇಕಿತ್ತು. ಆದರೆ, ಕಾಣದ ಕೈಗಳು ಇದರ ಹಿಂದೆ ಇರುವುದರಿಂದ ಇದುವರೆಗೂ ಆತನ ಬಂಧನವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ಗಂಟೆಗಳ ಬಳಿಕ ಘಟನೆಯ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ’ ಎಂದರು.
‘ದಲಿತ ಸಮುದಾಯಕ್ಕೆ ಸೇರಿ, ಬುದ್ಧ, ಅಂಬೇಡ್ಕರ್ ಅವರ ಅನುಯಾಯಿ ಆಗಿರುವ ನ್ಯಾಯಮೂರ್ತಿ ಗವಾಯಿ ಅವರು ಕಾನೂನಿ ಅಡಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇದನ್ನು ಸಹಿಸಲು ಆಗದ ಕೋಮುವಾದಿಗಳು, ಅವರನ್ನು ಉನ್ನತ ಹುದ್ದೆಯಿಂದ ದೂರ ಇರಿಸಲು ಇಂತಹ ಕೃತ್ಯ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ‘ಸನಾತನವಾದಿಗಳು ಹಾಗೂ ಆರ್‌ಎಸ್‌ಎಸ್‌ನವರು ಸಂವಿಧಾನದ ರಕ್ಷಣೆಯನ್ನು ಬಳಸಿಕೊಂಡು ವ್ಯವಸ್ಥಿತವಾಗಿ ದಾಳಿ ಮಾಡುತ್ತಿದ್ದಾರೆ. ಇದು ಕೇವಲ ಒಬ್ಬ ನ್ಯಾಯಮೂರ್ತಿಗೆ ಮಾಡಿದ ಅಪಮಾನವಲ್ಲ. ಸುಪ್ರೀಂಕೋರ್ಟ್‌ನ ಪೀಠವು ದೇಶದ ಅತ್ಯುನತ್ತವಾದ ಪೀಠವಾಗಿದೆ. ಆ ಪೀಠದಲ್ಲಿರುವ ಯಾರಿಗೆ ಅವಮಾನ ಮಾಡಿದರೂ ಇಡೀ ದೇಶದ ಜನರಿಗೆ ಅವಮಾನ ಮಾಡಿದ್ದಂತೆ. ಹೀಗಾಗಿ, ವಿಕೃತಿ ತೋರಿರುವ ಕಿಶೋರ್‌ನನ್ನು ಜೈಲಿನಲ್ಲಿ ಇರಿಸಬೇಕು’ ಎಂದು ಹೇಳಿದರು.
ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ಗೋಪಾಲ ತೆಳಗೇರಿ, ಬಸವರಾಜ ಗುಡಿಮನಿ, ಭೀಮರಾಯ ಹೊಸಮನಿ, ಹೊನ್ನಪ‍್ಪ ನಾಟೇಕಾರ, ಶ್ರೀಕಾಂತ ತಲಾರಿ, ಲಾಲಪ‍್ಪ ತಲಾರಿ, ಸೈದಪ್ಪ ಕೂಲೂರ, ನಿಂಗಣ್ಣ ತಿಪ್ಪನಳ್ಳಿ, ಬಾಲರಾಜ ಖಾನಾಪೂರ, ಪರಶುರಾಮ ಒಡೆಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪರೋಕ್ಷವಾಗಿ ಭಾಗಿಯಾದವರ ವಿರುದ್ಧವೂ ಕ್ರಮಕ್ಕೆ ಮನವಿ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ಆರೋಪಿ ಹಾಗೂ ಸದರಿ ಘಟನೆಯಲ್ಲಿ ಪರೋಕ್ಷವಾಗಿ ಭಾಗಿಯಾದವರ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಹೊಸ ಕೋರ್ಟ್ ಸಂಕೀರ್ಣದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಂಘದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು.
ನ್ಯಾಯಮೂರ್ತಿಯ ಮೇಲೆ ಶೂ ಎಸೆಯಲು ಯತ್ನಿಸಿದ್ದನ್ನು ವಕೀಲರ ಸಂಘ ಖಂಡಿಸುತ್ತದೆ ಎಂದರು. ಈ ವೇಳೆ ಮಾತನಾಡಿದ ವಕೀಲರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಪಿ ನಾಟೇಕರ್ ‘ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗೆ ಅಪಮಾನ ಮಾಡಿದರೆ ದೇಶದ ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಅವಮಾನ ಮಾಡಿದಂತೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆತನ ಹಿಂದೆ ಇರುವವರಿಗೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಉಪಾಧ್ಯಕ್ಷರಾದ ಭೀಮಾಶಂಕರ ಎನ್. ಅಚೋಲಾ ಸಾವಿತ್ರಿ ಎಂ. ಪಾಟೀಲ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಎಸ್. ಆಶನಾಳ ಜಂಟಿ ಕಾರ್ಯದರ್ಶಿ ವಿನೋದ ಕುಮಾರ ಜೈನ್ ಖಜಾಂಚಿಗಳಾದ ಮೋಹನಕುಮಾರ್ ಗಾಜರೆ ಸುಷ್ಮಾ ಜಾಧವ ವಕೀಲರಾದ ಕೆ.ಬಿ. ಅಂಗಡಿ ಸತೀಶ ಶಹಾಪುರಕರ್ ಶಿವಾರಜ ಕಟ್ಟಿಮನಿ ಶಿವರಾಮರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.