ಹುಣಸಗಿ: ‘ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಅಗ್ರೊ ಕೇಂದ್ರದಲ್ಲಿ ಖರೀದಿಸಿದ ತೊಗರಿ ಬಿತ್ತನೆ ಬೀಜ ಕಳಪೆ ಮಟ್ಟದ್ದಾಗಿದೆ’ ಎಂದು ಕರವೇ(ಟಿ.ಎ.ನಾರಾಯಣಗೌಡ ಬಣ) ಪದಾಧಿಕಾರಿಗಳು ಆರೋಪಿಸಿದ್ದಾರೆ.
‘ತಾಲ್ಲೂಕಿನ ಮದಲಿಂಗನಾಳ ಗ್ರಾಮದ ರೈತರಾದ ದ್ಯಾಮಣ್ಣ ಬಿಜ್ಜೂರ, ಅಂಬ್ರಪ್ಪ ಬಿರಾದಾರ, ಮಾರುತಿ ಕಕ್ಕೇರಿ ಹಾಗೂ ಕೊಡೇಕಲ್ಲ ಗ್ರಾಮದ ಹುಲಗಪ್ಪ ಚವನಬಾವಿ ಅವರು ಕೊಡೇಕಲ್ಲ ಗ್ರಾಮದ ಅಗ್ರೊ ಕೇಂದ್ರವೊಂದರಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ತೊಗರಿ ಬಿತ್ತನೆ ಬೀಜ ಖರೀದಿಸಿದ್ದರು. ದ್ಯಾಮಣ್ಣ ಬಿಜ್ಜೂರ ಐದು ಎಕರೆಯಲ್ಲಿ ತೊಗರಿ ಬಿತ್ತಿದ್ದಾರೆ. ಆದರೆ, ಈತನಕ ಬೆಳೆಯು ಸಂಪೂರ್ಣ ಕಾಯಿ ಹಿಡಿದಿಲ್ಲ. ಇದರಿಂದಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ’ ಎಂದು ದೂರಿದ್ದಾರೆ.
‘ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ಹೋರಾಟ ನಡೆಸಲಾಗುವುದು’ ಎಂದು ಸಂಘಟನೆಯ ವಲಯ ಉಪಾಧ್ಯಕ್ಷ ಬಸವರಾಜ ಕೊಂಡಗೂಳಿ, ಪ್ರಕಟಣೆಯಲ್ಲಿ ವಲಯಾಧ್ಯಕ್ಷ ಹನುಮಗೌಡ ಮಾಲಿಪಾಟೀಲ, ಮೌಲಾಲಿ ಸೈಯದ್, ಅಂಬ್ರೇಷ ಗುಡಗುಂಟಿ, ರಮೇಶ ಜೀರಾಳ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.