ADVERTISEMENT

ಮಕ್ಕಳನ್ನು ಸೆಳೆಯುವ ಬೈಲಾಪುರದ ‘ರೈಲು’ ಶಾಲೆ

ಶಿಕ್ಷಕರೊಂದಿಗೆ ಕೈಜೋಡಿಸಿ ಶಾಲೆ ಅಂದ ಹೆಚ್ಚಿಸಿದ ಗ್ರಾಮಸ್ಥರು

ಭೀಮಶೇನರಾವ ಕುಲಕರ್ಣಿ
Published 25 ಡಿಸೆಂಬರ್ 2019, 13:44 IST
Last Updated 25 ಡಿಸೆಂಬರ್ 2019, 13:44 IST
ಹುಣಸಗಿ ತಾಲ್ಲೂಕಿನ ಬೈಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ರೈಲಿನಂತೆ ಬಣ್ಣ ಬಳಿಯಲಾಗಿದೆ
ಹುಣಸಗಿ ತಾಲ್ಲೂಕಿನ ಬೈಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ರೈಲಿನಂತೆ ಬಣ್ಣ ಬಳಿಯಲಾಗಿದೆ   

ಹುಣಸಗಿ: ತಾಲ್ಲೂಕಿನ ಬೈಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ.

ಶಿಕ್ಷಕರು ಕೂಡಾ ಮಕ್ಕಳೊಂದಿಗೆ ಮಕ್ಕಳಂತಾಗಿ ಕಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಗಿರೀಶ ಸೂಳಿಬಾವಿ ತಿಳಿಸಿದರು.

ಈ ಶಾಲೆಯು 1962ರಲ್ಲಿ ಆರಂಭವಾಗಿದ್ದು, ಇಲ್ಲಿ ಕಲಿತವರಲ್ಲಿ ಕೆಲವರು ಉಪನ್ಯಾಸಕರಾಗಿದ್ದಾರೆ. ಇನ್ನು ಕೆಲವರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಭೀಮನಗೌಡ ಪಾಟೀಲ ಹೇಳುತ್ತಾರೆ.

ADVERTISEMENT

ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳು ದಾಖಲಾಗಿದ್ದು ಶೇ 90 ರಷ್ಟು ಹಾಜರಾತಿ ಇರುತ್ತಿದೆ. ಶಾಲೆಯ ಐದು ಕೋಣೆಗಳಲ್ಲಿ ಮೂರು ಕೋಣೆಗಳು ಸುಸ್ಥಿಯಲ್ಲಿವೆ. ಇನ್ನುಳಿದ ಎರಡು ಶಿಥಿಲಗೊಂಡಿದ್ದು ಅವುಗಳನ್ನು ತೆರವುಗೊಳಿಸಬೇಕಿದೆ.

ಶಾಲೆ ನವೀಕರಣ: ಪ್ರಸಕ್ತ ವರ್ಷದಲ್ಲಿ ಮುಖ್ಯ ಶಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಗಿರೀಶ ಸೂಳಿಬಾವಿ ಅವರ ಕಾಳಜಿಯಿಂದಾಗಿ ಶಾಲೆಯನ್ನು ಸಂಪೂರ್ಣವಾಗಿ ಬಣ್ಣಗಳಿಂದ ಅಲಂಕರಿಸಿದ್ದು, ಶಾಲೆಗೆ ರೈಲಿನ ಮಾದರಿಯಲ್ಲಿ ಬಣ್ಣ ಬಳಿಯಲಾಗಿದೆ. ಇದು ನಮ್ಮ ಗ್ರಾಮದ ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಗಣಪತಿ ಪಾಟೀಲ ವಿವರಿಸಿದರು.

ಶಿಕ್ಷಕರು ಚೆನ್ನಾಗಿ ಕಾರ್ಯ ನಿರ್ವಹಿಸಿದರೆ ಸಮುದಾಯ ಕೂಡಾ ಅವರ ಜೊತೆಯಲ್ಲಿಯೇ ಇರುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಗ್ರಾಮದ ಪ್ರಮುಖರೆಲ್ಲರೂ ಕೂಡಿಕೊಂಡು ಶಾಲೆಯ ಅಂದ ಹೆಚ್ಚಾಗುವಂತೆ ಮಾಡಲು ಶಿಕ್ಷಕರೊಂದಿಗೆ ಕೈಜೋಡಿಸಿರುವುದಾಗಿ ನಿಂಗಣ್ಣ ಪೊಲೀಸ್ ಪಾಟೀಲ ಹಾಗೂ ಯಲ್ಲಪ್ಪ ಪೊಲೀಸ್ ಪಾಟೀಲ ತಿಳಿಸಿದರು.

ಶಾಲೆಯ ಸುತ್ತ ಕಾಂಪೌಂಡ್‌ ಗೋಡೆ ನಿರ್ಮಿಸಬೇಕಿದೆ. ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ತೊಂದರೆ ಇದೆ. ನಿತ್ಯ ಬಿಸಿಯೂಟ ತಯಾರಿಕೆಗೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಶಾಲಾ ಆವರಣದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸುವಂತೆ ಈಗಾಗಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಶೇಖರಗೌಡ ಪಾಟೀಲ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಲಾಗಿದೆ ಎಂದು ಗ್ರಾಮದ ಹಿರಿಯರಾದ ಸೋಮನಗೌಡ ಪಾಟೀಲ ಹಾಗೂ ಬಸವರಾಜ ಪೊಲೀಸ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.