ADVERTISEMENT

ಬದ್ದೇಪಲ್ಲಿ: ಶ್ರದ್ಧಾ ಭಕ್ತಿಯಿಂದ ಬಕ್ರೀದ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:35 IST
Last Updated 7 ಜೂನ್ 2025, 13:35 IST
ಸೈದಾಪುರ ಸಮೀಪದ ಬದ್ದೇಪಲ್ಲಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್ ಆಚರಣೆ ಮಾಡಿದರು
ಸೈದಾಪುರ ಸಮೀಪದ ಬದ್ದೇಪಲ್ಲಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್ ಆಚರಣೆ ಮಾಡಿದರು   

ಬದ್ದೇಪಲ್ಲಿ(ಸೈದಾಪುರ): ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಶ್ರದ್ಧಾ, ಭಕ್ತಿಯೊಂದಿಗೆ ಆಚರಣೆ ಮಾಡಿದರು.

ಸಮೀಪದ ಬದ್ದೇಪಲ್ಲಿ ಗ್ರಾಮದ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಂ ಸಮುದಾಯದ ಮಕ್ಕಳು, ಹಿರಿಯರು, ಕಿರಿಯರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಧರ್ಮಗುರುಗಳು ಹಬ್ಬದ ಸಂದೇಶ ಸಾರಿದರು. ‘ಪ್ರವಾದಿ ಹಜರತ್‍ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್‍ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ಹಬ್ಬವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಅವರು ಹಾಕಿಕೊಟ್ಟ ಮಾರ್ಗದಲ್ಲಿ ತತ್ವಾದರ್ಶಗಳನ್ನು ಪಾಲಿಸುತ್ತ ಸಾಗಬೇಕು. ಅಸಾಹಯಕರಿಗೆ ನಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಬಾಳಬೇಕು’ ಎಂದರು.

ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು ಅಸಹಾಯಕರಿಗೆ ಬಟ್ಟೆ, ಧನಸಹಾಯ ಮಾಡಿದರು.

ಸೈದಾಪುರ, ಕೊಂಡಾಪುರ, ಕಡೇಚೂರು, ಚಂದಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮುಸ್ಲಿಮರು ಹೊಸ ಉಡುಪುಗಳನ್ನು ಧರಿಸಿ ಬಕ್ರೀದ್‌ ಆಚರಿಸಿದರು. ಮನೆಯಲ್ಲಿ ಹಾಲಿನಿಂದ ತಯಾರಿಸಿದ ಸುರಕುಂಬ ಪಾಯಸವನ್ನು ಆಪ್ತರಿಗೆ, ಸ್ನೇಹಿತರಿಗೆ, ಮನೆಯ ನೆರೆಹೊರೆಯವರಿಗೆ ಹಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.