ADVERTISEMENT

ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ: ಕಡಿಮೆ ಅವಧಿ ಬೆಳೆ ಬೆಳೆಯಲು ಶರಣಬಸಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:46 IST
Last Updated 9 ಅಕ್ಟೋಬರ್ 2025, 5:46 IST
<div class="paragraphs"><p>ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. </p></div>

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

   

ನಾರಾಯಣಪುರ (ಹುಣಸಗಿ): ‘ಹಿಂಗಾರು ಹಂಗಾಮಿನಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲಾಗುತ್ತದೆ. ರೈತರು ನೀರು ಪೋಲು ಮಾಡದೇ, ಕಡಿಮೆ ಅವಧಿಯಲ್ಲಿ ಬರುವ ಬೆಳೆಗಳನ್ನು ಬೆಳೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸಲಹೆ ನೀಡಿದರು.

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಯದಲ್ಲಿ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಬಳಿಕ ಮಾತನಾಡಿದರು.

ADVERTISEMENT

‘ಈ ವರ್ಷ ಆರಂಭದಲ್ಲೇ ಜಲಾಶಯಗಳು ಭರ್ತಿಯಾಗಿವೆ. ನಂತರ ಅಧಿಕ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಆದ್ದರಿಂದ ರೈತರು ಹಿಂಗಾರಿಗೆ ಕಾಳಜಿ ವಹಿಸಬೇಕು’ ಎಂದರು.

‘ರೈತರು ಹಿಂಗಾರಿನಲ್ಲಿ 90 ದಿನಗಳಲ್ಲಿ ಬರುವ ಬೆಳೆಗಳನ್ನು ಹಾಕಬೇಕು. ರೈತರು ತೊಂದರೆಗೆ ಒಳಗಾದರೆ ದೇಶಕ್ಕೂ ಹಾನಿ. ಬೆಳೆ ಹಾನಿಯ ಕುರಿತು ಸರ್ವೆ ಕಾರ್ಯ ಭರದಿಂದ ನಡೆದಿದೆ. ಹಾನಿಯ ವರದಿ ಸರ್ಕಾರಕ್ಕೆ ಕಳಿಸಿದ ತಕ್ಷಣ ಒಂದು ವಾರದಲ್ಲಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಕೆರೆ ನಿರ್ಮಾಣ ಹಾಗೂ ಕೆರೆ ತುಂಬುವ ಕಾರ್ಯ ಜಿಲ್ಲೆಯಲ್ಲಿಯೂ ಆರಂಭಿಸಲಾಗುವುದು ಎಂದರು.

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ನಮ್ಮ ವಾಗ್ದಾನವಾಗಿದೆ. ಅದಕ್ಕಾಗಿ ರಾಜ್ಯದ ಸಂಸದರು ಕಾರ್ಯ ಪ್ರವೃತ್ತರಾಗಬೇಕು. ಕೇಂದ್ರ ಸರ್ಕಾರದಲ್ಲಿ ಈ ಕುರಿತು ಪ್ರಯತ್ನಿಸಬೇಕು ಎಂದರು.

ಜಿಲ್ಲೆಯಲ್ಲಿ ಮನೆಮನೆಗೆ ನೀರು ಒದಗಿಸುವ ಜಲಧಾರೆ ಯೋಜನೆ ಮುಂದಿನ ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯಡಿ ಪೈಪ್‌ಲೈನ್ ಕೆಲಸವಾಗಿದ್ದು, ಇನ್ನು ಕೆಲ ಕೆಲಸ ಬಾಕಿ ಇದೆ, ಶೀಘವೇ ಪೂರ್ಣಗೊಳಿಸಲಾಗುವುದು ಎಂದರು.

ಶಾಸಕ ರಾಜಾ ವೇಣುಗೋಪಾಲನಾಯಕ, ಶಾಸಕ ಚನ್ನರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಾರಾಯಣಪುರ ಮುಖ್ಯ ಎಂಜಿನಿಯರ್ ರಮೇಶ ಜಿ. ರಾಠೋಡ, ಇಇ ಹನುಮಂತಪ್ಪ ಕೊಣ್ಣೂರು, ರಾಜಾ ಸಂತೋಷನಾಯಕ, ರಾಜಾ ಕುಮಾರನಾಯಕ, ರಾಜಾ ಸುಶಾಂತನಾಯಕ, ಮುಖಂಡರಾದ ವಿಠ್ಠಲ ಯಾದವ, ಯಂಕೋಬ ಯಾದವ, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ದಂಡಿನ್‌, ನಿಂಗರಾಜ ಬಾಚಿಮಟ್ಟಿ, ಎಂ.ಆರ್‌.ಖಾಜಿ, ಅಬ್ದುಲ್‌ ಗಪಾರ ನಗನೂರಿ, ದೊಡ್ಡದೇಸಾಯಿ ದೇವರಗೋನಾಲ, ರವಿಚಂದ್ರ ಆಲ್ದಾಳ, ಬಸವರಾಜ ಸಜ್ಜನ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ನಾಯ್ಕ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಗಿ, ರಮೇಶ ಬೇಟೆಗಾರ, ಎಇಇ ವಿದ್ಯಾಧರ, ರಾಘವೇಂದ್ರ, ವಿಜಯಕುಮಾರ ಅರಳಿ ಸೇರಿದಂತೆ ಅನೇಕರಿದ್ದರು.

ಅದ್ದೂರಿ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ಜಲಾಶಯದ ಮೇಲ್ಭಾಗದಲ್ಲಿ ಭಾಜಾ ಭಜಂತ್ರಿ ಹಾಗೂ ಡೊಳ್ಳು ಕುಣಿತ ಹಾಗೂ ಪೂರ್ಣಕುಂಭದೊಂದಿಗೆ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಜಲಾಶಯದ ಗೇಜ್‌ ರೂಮ್‌ನಲ್ಲಿ ಅರ್ಚಕ ರಾಘವೇಂದ್ರಾಚಾರ್ಯ ಮಾರಲಬಾವಿ ಅವರ ನೇತೃತ್ವದಲ್ಲಿ ಶ್ರೀದೇವಿ ಹಾಗೂ ಗಂಗಾಪೂಜೆ ಜರುಗಿತು. ಬಳಿಕ ಜಲಾಶಯದ ಹಿನ್ನಿರಿನಲ್ಲಿ ಬಾಗಿನ ಸಮರ್ಪಿಸಲಾಯಿತು. ಒಟ್ಟು 33.313 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿರುವ ಬಸವಸಾಗರ ಜಲಾಶಯದಲ್ಲಿ ಬುಧವಾರ 33.313 ಟಿಎಂಸಿ ಸಂಪೂರ್ಣ ಭರ್ತಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.