ADVERTISEMENT

ರಾಜನಕೋಳೂರ: ಬ್ಯಾಟರಿ ಚಾಲಿತ ಸೈಕಲ್ ವಿನ್ಯಾಸ

ಪರಿಸರ ಸ್ನೇಹಿ ಜೊತೆಗೆ ಉತ್ತಮ ಆರೋಗ್ಯಕ್ಕೂ ಉಪಯುಕ್ತ

ಭೀಮಶೇನರಾವ ಕುಲಕರ್ಣಿ
Published 19 ಏಪ್ರಿಲ್ 2021, 4:11 IST
Last Updated 19 ಏಪ್ರಿಲ್ 2021, 4:11 IST
ಹುಣಸಗಿ ತಾಲ್ಲೂಕಿನ ರಾಜನಕೋಳೂರ ಗ್ರಾಮದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸೈಕಲ್‌ನೊಂದಿಗೆ ಚಿತ್ರಶೇಖರಯ್ಯ ಹಿರೇಮಠ
ಹುಣಸಗಿ ತಾಲ್ಲೂಕಿನ ರಾಜನಕೋಳೂರ ಗ್ರಾಮದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸೈಕಲ್‌ನೊಂದಿಗೆ ಚಿತ್ರಶೇಖರಯ್ಯ ಹಿರೇಮಠ   

ರಾಜನಕೋಳೂರ (ಹುಣಸಗಿ): ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಕಡಿಮೆ ಖರ್ಚಿನಲ್ಲಿ ಸಂಚರಿಸಲು ಇಲ್ಲಿನ ಮೆಕ್ಯಾನಿಕ್‌ ಚಿತ್ರಶೇಖರಯ್ಯ ಸೂಗಯ್ಯ ಹಿರೇಮಠ ಅವರು ಬ್ಯಾಟರಿ ಚಾಲಿತ ಸೈಕಲ್ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ ಅವರು ಲಭ್ಯವಿರುವ ಬಿಡಿ ಭಾಗಳನ್ನು ಬಳಸಿಕೊಂಡು ₹15 ಸಾವಿರ ವೆಚ್ಚ ಮಾಡಿದ್ದಾರೆ.

‘ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಶಾಲೆ ಕಲಿತ ನಾನು ಇಲ್ಲಿನ ‘ಬೋರುಕಾ ಪವರ್ ಹೌಸ್‌’ ವಿದ್ಯುತ್ ಉತ್ಪಾದನಾ ಘಟಕದಲ್ಲಿ 2 ವರ್ಷ ಪ್ಯಾನಲ್ ವರ್ಕ್ಸ್‌ನಲ್ಲಿ ಕೆಲಸ ಮಾಡಿದೆ. ನಂತರ ಸ್ವಯಂ ಉದ್ಯೋಗ ಕೈಗೊಂಡು 15 ವರ್ಷಗಳಿಂದ ಮಿನಿ ರೈಸ್ ಮಿಲ್ ಹಾಗೂ ಕಿಮಿನಾಶಕ ಸಿಂಪಡಿಸುವ ಪೆಟ್ರೋಲ್ ಪಂಪ್‌ಗಳ ದುರಸ್ತಿ ಕಾರ್ಯ ಮಾಡುತ್ತಿರುವೆ’ ಎಂದು ಚಿತ್ರಶೇಖರಯ್ಯ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಚಿಕ್ಕ ವಯ್ಸಸಿನಿಂದ ಸಾಧನೆ ಮಾಡಬೇಕು ಎಂಬ ಬಯಕೆಯಿತ್ತು. ಈ ದಿಕ್ಕಿನಲ್ಲಿ ಮುನ್ನಡೆಯುತ್ತಾ, 8 ವರ್ಷಗಳ ಹಿಂದೆ ಗೇರ್ ಸೈಕಲ್ ವಿನ್ಯಾಸಗೊಳಿಸಿದ್ದೆ. ಆ ಬಳಿಕ ಈಗ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ್ದೇನೆ. ಒಂದು ಹೊಸ ಸೈಕಲ್‌ಗೆ ಒಂದು ಮೋಟರ್, ಬ್ಯಾಟರಿ, ಪ್ರೀ ವೀಲ್, ಚೈನ್ ಅಳವಡಿಸಿದ್ದು, ರಾತ್ರಿ ಹೊತ್ತಿನಲ್ಲಿ ಸಂಚರಿಸಲು ಹೆಡ್‌ಲೈಟ್ ಮತ್ತು ಹಾರನ್ ಅಳವಡಿಸಲಾಗಿದೆ‌’ ಎಂದು ಅವರು ತಿಳಿಸಿದರು.

ADVERTISEMENT

‘ಒಟ್ಟು 3 ತಾಸು ಈ ಬ್ಯಾಟರಿ ಚಾರ್ಜ್ ಮಾಡಿದರೆ 25 ಕಿ.ಮೀ ದೂರ ಕ್ರಮಿಸಬಹುದು. ಚಾರ್ಜ್‌ ಖಾಲಿಯಾದಾಗ ಪೆಡಲ್ ತುಳಿದರೆ ಇನ್ನೂ ಹೆಚ್ಚು ವೇಗವಾಗಿ ಸಂಚರಿಸುತ್ತದೆ’ ಎಂದು ವಿವರಿಸಿದರು.

‘ಈ ಸೈಕಲ್‌ಗೆ ಒಂದು ಯುನಿಟ್ ಮಾತ್ರ ವಿದ್ಯುತ್ ಖರ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಲಿಥಿಯಂ ಬ್ಯಾಟರಿ ಚಾಲಿತ ಹೊಲದಲ್ಲಿ ಕಳೆ ತೆಗೆಯುವ ಯಂತ್ರ ವಿನ್ಯಾಸಗೊಳಿಸಲು ತಯಾರಿ ನಡೆಸಿರುವೆ’ ಎಂದು ಅವರು ತಿಳಿಸಿದರು.

ಮಾಹಿತಿಗೆ ಸಂಪರ್ಕಿಸಿ ದೂರವಾಣಿ ಸಂಖ್ಯೆ: 8970707490

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.