ADVERTISEMENT

‘ಹೊಟ್ಟಿ ಕೂಳಿಗಾಗಿ ಇಲ್ಲಿ ಬಂದು ಬಿದ್ದಿವಿ…’

ಪ್ರವಾಹ ಬಂದಾಗಲೆಲ್ಲ ಇದೇ ಪರಿಸ್ಥಿತಿ; ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:13 IST
Last Updated 30 ಸೆಪ್ಟೆಂಬರ್ 2025, 4:13 IST
ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿರುವ ಮೋರಾರ್ಜಿ ವಸತಿ ಶಾಲೆಯ ಬಾಲಕರ ವಸತಿ ನಿಲಯದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಇರುವ ಶಿವನೂರ ಗ್ರಾಮಸ್ಥರು.
ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿರುವ ಮೋರಾರ್ಜಿ ವಸತಿ ಶಾಲೆಯ ಬಾಲಕರ ವಸತಿ ನಿಲಯದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಇರುವ ಶಿವನೂರ ಗ್ರಾಮಸ್ಥರು.   

ವಡಗೇರಾ: ‘ತಲಿಗೆ ಎಣ್ಣಿ ಇಲ್ಲ, ಮೈಗೆ ಸಾಬೂನ್‌, ಬಟ್ಟೆ ಒಗೆಯಲು ಸಬಕಾರ್ ಇಲ್ಲ, ಹೊಟ್ಟಿ ಕೂಳಿಗಾಗಿ ಇಲ್ಲಿ ಬಂದು ಬಿದ್ದಿವಿ. ನಿನ್ನೆ ( ರವಿವಾರ) ದಿಂದ ಬರೇ ಅನ್ನ ಕೊಡಾಕತ್ಯಾರ, ನಾವು ರೊಟ್ಟಿ ತಿನ್ನೊರ, ಅನ್ನಕ್ಕ ಹೊಟ್ಟಿ ತುಂಬವಲ್ದು’ ಇದು ಶಿವನೂರ ಗ್ರಾಮದಿಂದ ಬೆಂಡೆಬೆಂಬಳಿ ಕಾಳಜಿ ಕೇಂದ್ರಕ್ಕೆ ಬಂದ ಸಂತ್ರಸ್ಥರ ಮಾತುಗಳು.

ಭೀಮಾ ನದಿಗೆ ಪ್ರವಾಹದಿಂದ ವಡಗೇರಾ ತಾಲ್ಲೂಕಿನ ಶಿವನೂರ ಗ್ರಾಮ ನಡುಗಡ್ಡೆಯಾಗಿ ಪರಿವರ್ತೆನೆಯಾಗಿದೆ. ಗ್ರಾಮವು ಸುಮಾರು 500 ಜನಸಂಖ್ಯೆ ಹೊಂದಿದ್ದು, 300 ಜನರನ್ನು ಜಿಲ್ಲಾಡಳಿತ ಬೆಂಡೆಬೆಂಬಳಿ ಗ್ರಾಮದ ಮೋರಾರ್ಜಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರ ಸ್ಥಳಾಂತರಿಸಿದೆ. ಉಳಿದವರು ಜಾನುವಾರುಗಳನ್ನು ನೋಡಿಕೊಳ್ಳಲು ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ.

ಕಾಳಜಿ ಕೇಂದ್ರದಲ್ಲಿ ಹೆಚ್ಚು ವಯಸ್ಕರು, ಮಹಿಳೆಯರು, ವಿದ್ಯಾರ್ಥಿನಿಯರು, ಮಕ್ಕಳು ಇದ್ದಾರೆ. ಇಲ್ಲಿ  ವೈದ್ಯಕೀಯ ವ್ಯವಸ್ಥೆ, ತುರ್ತು ಸಮಯದಲ್ಲಿ ಸಕಾಲದಲ್ಲಿ ಆಸ್ಪತ್ರೆಗೆ ತಲುಪಲು ಆಂಬ್ಯುಲೆನ್ಸ್‌ ವ್ಯವಸ್ಥೆ ಜೊತೆಗೆ ಒಂದು ಪೊಲೀಸ್‌ ವ್ಯಾನ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

ADVERTISEMENT

ಪ್ರತಿ ಬಾರಿ ಭೀಮಾ ನದಿಗೆ ಪ್ರವಾಹ ಬಂದಾಗ ಶಿವನೂರ ಗ್ರಾಮಸ್ಥರಿಗೆ ತೊಂದರೆಯಾಗಿತ್ತದೆ. 2019, 2023, 2025ರಲ್ಲಿ ಭೀಮಾ ನದಿಗೆ ಪ್ರವಾಹ ಬಂದ ಸಮಯದಲ್ಲಿ ಶಿವನೂರ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವುದು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿದೆ.

ಗ್ರಾಮವನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯಲ್ಲಿ ಸಮಯದಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ಥರು ಅಳಲು ತೋಡಿಕೊಂಡರು.

ಶಿವನೂರ ಗ್ರಾಮವನ್ನು 2ಕಿ.ಮೀ ಅಂತರದಲ್ಲಿರುವ ಏಳಬಂಡೆ ಹತ್ತಿರ ಸ್ಥಳಾಂತರಿಸಿದಾಗ ಮಾತ್ರ ಪ್ರವಾಹದಿಂದ ರಕ್ಷಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ಜಿಲ್ಲಾಡಳಿತ ಗ್ರಾಮಸ್ಥರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲಿನ ಗ್ರಾಮಸ್ಥರ ಒತ್ತಾಸೆಯಾಗಿದೆ.

ವಡಗೇರಾ ಕಾಳಜಿ ಕೇಂದ್ರದ ಮುಂದೆ ಭೀಮಾ ನದಿಯ ನೀರು ಯಾವಾಗ ಕಡಿಮೆಯಾಗುತ್ತೆ ನಾವು ಯಾವಾಗ ಗ್ರಾಮಕ್ಕೆ ಹೋಗ ಬಹುದು ಎಂದು ಚರ್ಚೆ ಮಾಡುತ್ತಿರುವ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.