ADVERTISEMENT

ಮತ್ತೆ ಆತಂಕದಲ್ಲಿ ಭೀಮಾ ನದಿ ಪಾತ್ರದ ಜನ

ಏರಿಕೆಯಾಗುತ್ತಿರುವ ಭೀಮಾ ಪ್ರವಾಹದ ನೀರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:13 IST
Last Updated 19 ಅಕ್ಟೋಬರ್ 2020, 16:13 IST
ಯಾದಗಿರಿಯ ಭೀಮಾ ನದಿ ಸೇತುವೆ ಸಮೀಪ ಹಿನ್ನೀರಿನಿಂದ ಭತ್ತದ ಗದ್ದೆಗೆ ನೀರು ನುಗ್ಗಿದೆ  
ಯಾದಗಿರಿಯ ಭೀಮಾ ನದಿ ಸೇತುವೆ ಸಮೀಪ ಹಿನ್ನೀರಿನಿಂದ ಭತ್ತದ ಗದ್ದೆಗೆ ನೀರು ನುಗ್ಗಿದೆ     

ಯಾದಗಿರಿ: ಸನ್ನತಿ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸುವ ಪ್ರಮಾಣ ಸೋಮವಾರ ಏರುಗತಿಯಲ್ಲಿದ್ದು, ನದಿ ಪಾತ್ರದ ಜನ ಮತ್ತೆ ಆತಂಕ ಪಡುವಂತೆ ಆಗಿದೆ.

ಸೋಮವಾರ ಬೆಳಿಗ್ಗೆ 6.10 ನಿಮಿಷಕ್ಕೆ 3.52 ಲಕ್ಷ ಕ್ಯುಸೆಕ್‌ ನೀರು ಭೀಮಾನದಿಗೆ ಹರಿದು ಬರುತ್ತಿದೆ. ಗಂಟೆ ಗಂಟೆಗೆ ನೀರಿನ ಪ್ರಮಾಣ ಹೆಚ್ಚುತ್ತಲೇ ಇತ್ತು. 9 ಗಂಟೆಗೆ 3.55 ಲಕ್ಷಕ್ಕೆ ಏರಿಕೆಯಾಯಿತು.

ಸಂಜೆ 6.30ಕ್ಕೆ 3.83 ಲಕ್ಷ ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿಸಲಾಗುತ್ತಿದೆ. ಕಲಬುರ್ಗಿಯ ಸೊನ್ನ ಬ್ಯಾರೇಜ್‌ಗೆ ಒಳಹರಿವು ಇಳಿಕೆಯಾಗಿದ್ದು, ಭೀಮಾ ನದಿಗೆ ಹರಿಸುವ ನೀರಿನ ಪ್ರಮಾಣವೂ ಇಳಿಕೆಯಾಗಲಿದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

2.84 ಟಿಎಂಸಿ ಸಾಮರ್ಥ್ಯದ ಸನ್ನತಿ ಬ್ಯಾರೇಜ್‌ನಲ್ಲಿ 1.8 ಟಿಎಂಸಿ ನೀರು ಕಾಯ್ದುಕೊಂಡು ಉಳಿದ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದೆ. ಪ್ರಸ್ತುತ ನೀರಿನ ಮಟ್ಟ 374.15 ಮೀ ಇದ್ದು, 31 ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ.

ಇಳಿಕೆಯಾದ ಕೃಷ್ಣಾ ಪ್ರವಾಹ:ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುವ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸೋಮವಾರ ಬೆಳಿಗ್ಗೆ 6 ಗಂಟೆಗೆ1.05 ಲಕ್ಷ ಒಳ ಹರಿವಿದ್ದರೆ, 92,880 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿತ್ತು. ಸಂಜೆ ವೇಳೆ ನೀರಿನ ಹೊರ ಹರಿವು ಇಳಿಕೆಯಾಗಿದೆ.

ಮಧ್ಯಾಹ್ನ 1 ಗಂಟೆಗೆ1.05ಲಕ್ಷದಿಂದ 50ಸಾವಿರಕ್ಕೆ ಇಳಿಕೆ ಮಾಡಲಾಗಿತ್ತು.ಮತ್ತೆಮಧ್ಯಾಹ್ನ 2.30ಕ್ಕೆ 15,000 ಒಳಹರಿವಿದ್ದರೆ 16 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ಕೃಷ್ಣಾ ನದಿ ಪಾತ್ರದ ಜನ ನಿಟ್ಟುಸಿರು ಬಿಡುವಂತೆ ಆಗಿದೆ.

8 ಲಕ್ಷ ಕ್ಯುಸೆಕ್ ನೀರು ಬರಲಿಲ್ಲ!

ಕಲಬುರ್ಗಿ ಜಿಲ್ಲೆಯ ಅಫಜಪುರ ಸೊನ್ನ ಬ್ಯಾರೇಜ್‌ನಿಂದ ಭೀಮಾ‌ ನದಿಗೆ 8 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ನದಿ ಪಾತ್ರಕ್ಕೆ ತೆರಳದಂತೆ, ಸ್ಥಳಾಂತರವಾಗುವಂತೆ ಎಂದು ಅಧಿಕಾರಿಗಳು ಗ್ರಾಮಗಳಲ್ಲಿ ಡಂಗೂರಸಾರಿಸಿದ್ದರು. ನಾಲ್ಕು ದಿನಗಳಾದರೂ ಪ್ರವಾಹದ ನೀರು ಭೀಮಾ ನದಿಗೆ ಹರಿದು ಬಂದಿಲ್ಲ. ಹಾಗಾದರೆ ಎಲ್ಲಿಗೆ ಪ್ರವಾಹದ ನೀರು ಎಲ್ಲಿಗೆ ಹೋಯಿತು ಎಂದು ಜಿಲ್ಲೆಯ ಜನತೆಯಲ್ಲಿ ಪ್ರಶ್ನೆ ಎದ್ದಿದೆ.

ಅಷ್ಟು ಪ್ರಮಾಣದಲ್ಲಿ ನೀರು ಬಾರದ ಕಾರಣ ಕೆಲ ಗ್ರಾಮಸ್ಥರು ಗ್ರಾಮಗಳಿಗೆ ತೆರಳಿದ್ದರು. ಈಗ ಮತ್ತೆ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರೆ ತರಲು ಅಧಿಕಾರಿಗಳು ತೆರಳಿದರೆ ಬರಲು ಗ್ರಾಮಸ್ಥರು ಒಪ್ಪುತ್ತಿಲ್ಲ. ಇದರಿಂದ ಸರಿಯಾಗಿ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.