ADVERTISEMENT

ಯಾದಗಿರಿ | ಭೋರ್ಗರೆಯುತ್ತಿದೆ ‘ಭೀಮೆ’: ತಪ್ಪದ ಬವಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:02 IST
Last Updated 29 ಸೆಪ್ಟೆಂಬರ್ 2025, 4:02 IST
ಯಾದಗಿರಿಯಲ್ಲಿ ಭಾನುವಾರ ನಗರ ಸಮೀಪದ ರೈಲ್ವೆ ಹಳಿವರೆಗೂ ಆವರಿಸಿಕೊಂಡು ಭೀಮಾ ನದಿ ಪ್ರವಾಹದ ನೀರು
ಯಾದಗಿರಿಯಲ್ಲಿ ಭಾನುವಾರ ನಗರ ಸಮೀಪದ ರೈಲ್ವೆ ಹಳಿವರೆಗೂ ಆವರಿಸಿಕೊಂಡು ಭೀಮಾ ನದಿ ಪ್ರವಾಹದ ನೀರು   

ಯಾದಗಿರಿ: ಭೀಮಾ ನದಿಯು ಪ್ರವಾಹದಿಂದ ಇನ್ನೂ ಭೋರ್ಗರೆಯುತ್ತಲೇ ಇದೆ. ಜಲಾವೃತ ಪ್ರದೇಶಗಳಲ್ಲಿ ಜನರು ಸಂಕಷ್ಟದಲ್ಲೇ ದಿನಗಳನ್ನು ದೂಡುವಂತಾಗಿದೆ.

ಭಾನುವಾರ ಜಿಲ್ಲೆಯ ನದಿ ತೀರದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಿತು. ನದಿಯಲ್ಲಿ ಪ್ರವಾಹ ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್‌ ತಂಡ ನಿಯೋಜನೆಗೊಂಡು ಕಾರ್ಯೋನ್ಮುಖವಾಗಿದೆ.

ಶಹಾ‍ಪುರ ತಾಲ್ಲೂಕಿನ ಹುರಸಗುಂಡಗಿ ಹಾಗೂ ರೋಜಾ ಎಸ್‌ ಗ್ರಾಮಗಳ 115 ಕುಟುಂಬಗಳ 400 ಜನರನ್ನು ಹಾಗೂ ವಡಗೇರಾ ತಾಲ್ಲೂಕಿನ ಶಿವನೂರು, ನಾಯ್ಕಲ್ ಮತ್ತು ಮಾಚನೂರು ಗ್ರಾಮಗಳ 330 ಕುಟುಂಬಗಳ 960 ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ADVERTISEMENT

ಪ್ರವಾಹದಿಂದ ರೋಜಾ ಎಸ್ ಶಿರವಾಳ– ಹೊಸುರ, ವಡಗೇರಾ ತಾಲ್ಲೂಕಿನ ಶಿವನೂರ, ಜೋಳದಡಗಿ ಹಾಗೂ ಆನೂರ (ಕೆ), ಕುಮನೂರ – ಅರ್ಜುಣಗಿ, ಯಾದಗಿರಿ ತಾಲ್ಲೂಕಿನ ಲಿಂಗೇರಿ, ಮಲ್ಲಾರ ಹಾಗೂ ದೊಡ್ಡ ಹಳ್ಳದ ಸೇತುವೆ ಮುಳುಗಿ ಕಲಬುರಗಿ–ಯಾದಗಿರಿ ಸಂಚಾರ ಸ್ಥಗಿತವಾಗಿದೆ. ಅನ್ಯ ಮಾರ್ಗದ ಮೂಲಕ ವಾಹನಗಳು ಓಡಾಡುತ್ತಿವೆ.

ಮಳೆಯಿಂದ ಇದುವರೆಗು 104 ಮನೆಗಳಿಗೆ ಹಾನಿಯಾಗಿ, 22 ಜಾನುವಾರುಗಳು ಮೃತಪಟ್ಟಿವೆ. ನದಿ ನೀರು ಹಾಗೂ ಮಳೆಗೆ ಸುಮಾರು 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ, 120 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆಗಳು ಸಹ ಹಾನಿಗೆ ಒಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರಕ್ಕೂ ವ್ಯಾಪಿಸಿಕೊಂಡ ಪ್ರವಾಹ: ಪ್ರವಾಹದ ನೀರು ನಗರಕ್ಕೂ ವ್ಯಾಪಿಸಿಕೊಂಡು ನೂರಾರು ಮನೆಗಳು, ಕಟ್ಟಡಗಳು ಜಲಾವೃತ್ತವಾಗಿವೆ. ಆರ್‌ಟಿಒ ಕಚೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 150ರ ವರೆಗೂ ಬಂದಿದೆ.

ಶಹಾಪುರ ರಸ್ತೆ ಮೀನು ಮಾರುಕಟ್ಟೆ, ಸಿಮೆಂಟ್‌ನ ಉತ್ಪನ್ನಗಳ ತಯಾರಿಕಾ ಘಟಕಗಳು ಮುಳುಗಡೆಯಾಗಿವೆ. ವೀರಭದ್ರೇಶ್ವರ ನಗರ, ವಿಶ್ವಾರಾಧ್ಯ ನಗರ, ಗ್ರೀನ್ ಸಿಟಿ ಬಡವಾಣೆ, ಲಕ್ಷ್ಮಿ ನಗರ ಪ್ರದೇಶದ ಮನೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಬಿಜೆಪಿ ಕಚೇರಿಯೂ ಜಲಾವೃತ್ತಗೊಂಡಿದೆ. ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಯಾದಗಿರಿ ನಗರ ಸಮೀಪದ ದೊಡ್ಡ ಹಳ್ಳದ ಸೇತುವೆ ಭೀಮಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿರುವುದು
ಯಾದಗಿರಿ ನಗರದ ಜನ ವಸತಿ ಪ್ರದೇಶಕ್ಕೆ ನುಗ್ಗಿದ ಪ್ರವಾಹದ ನೀರು

ಎನ್‌ಎಚ್‌–150 ಸಂಚಾರ ಬಂದ್: ವಾಹನ ದಟ್ಟಣೆ ಸಮೀಪದ ದೊಡ್ಡ ಹಳ್ಳದ ರಾಷ್ಟ್ರೀಯ ಹೆದ್ದಾರಿ-150ರ ಸೇತುವೆ ಮುಳುಗಡೆಯಾಗಿದ್ದು ಕಲಬುರಗಿ- ಯಾದಗಿರಿ- ತೆಲಂಗಾಣದ ನಾರಾಯಣಪೇಟೆ ಮಾರ್ಗದ ವಾಹನಗಳು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ಗುಂಡಿಗಳಿಂದ ಆವರಿಸಿರುವ ಹತ್ತಿಕುಣಿ ಕ್ರಾಸ್‌ ಹಾಗೂ ಶಹಾಪುರ ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡುಬಂತು.‌ ಬಸ್ ಸಣ್ಣ ವಾಹನಗಳನ್ನು ಜಿಲ್ಲಾ ಕೋರ್ಟ್ ಸಂಕೀರ್ಣ– ಗಂಗಾನಗರ– ಹತ್ತಿಕುಣಿ ಕ್ರಾಸ್‌ ಮಾರ್ಗವಾಗಿ ಸಂಚರಿಸಿದವು. ದೊಡ್ಡ ಸರಕು ವಾಹನಗಳು ಅಬ್ಬೆ ತುಮಕೂರು ಬ್ರಿಡ್ಜ್‌ ಕಂ ಬ್ಯಾರೇಜ್ ವಡಗೇರಾ ಕ್ರಾಸ್‌ ಹಳೇ ಸೇತುವೆ ಮೂಲಕ ನಗರದಲ್ಲಿ ಹಾದು ಹೋದವು. ಈ ಎರಡೂ ಮಾರ್ಗದಲ್ಲಿ ವಾಹನ ದಟ್ಟಣೆ ಕಂಡುಬಂತು.

ಮುಳುಗಿದ ಟಿಸಿಗಳು ಕೊಚ್ಚಿ ಹೋದ ಪಂಪ್‌ಸೆಟ್‌ ನದಿ ನೀದು ಬೆಳೆಗಳಿರುವ ಜಮೀನುಗಳಿಗೆ ನುಗ್ಗಿ ಪ್ರವಾಹದ ರಭಸದಲ್ಲಿ ಕೃಷಿ ಪಂಪ್‌ಸೆಟ್‌ಗಳು ಕೊಚ್ಚಿಕೊಂಡು ಹೋಗಿವೆ. ವಿದ್ಯುತ್ ಪರಿವರ್ತಕಗಳು (ಟಿಸಿ) ಮುಳುಗಡೆಯಾಗಿವೆ. ನದಿ ತೀರದ ಉದ್ದಕ್ಕೂ ನೀರಾವರಿ ಕೃಷಿ ಮಾಡಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಮುನ್ನೆಚ್ಚರಿಕೆಯಿಂದ ಕೆಲವರು ಕೃಷಿ ಪಂಪ‍್‌ಸೆಟ್‌ಗಳನ್ನು ಸುರಕ್ಷತ ಸ್ಥಳಕ್ಕೆ ಸ್ಥಳಾಂತರಿಸಿದರು. ನದಿಯಿಂದ ದೂರದಲ್ಲಿದೆ ಎಂದು ಕೆಲವರು ಹಾಗೆಯೇ ಬಿಟ್ಟಿದ್ದರಿಂದ ಪ್ರವಾಹಕ್ಕೆ ಆಹುತಿಯಾಗಿವೆ. ‘ನನ್ನ 10 ಎಕರೆ ಜಮೀನಿಗೆ ನುಗ್ಗಿದೆ. ಎರಡು ಟಿಸಿಗಳು ಸಹ ಮುಳುಗಡೆಯಾಗಿ 6 ಕೃಷಿ ಪಂಪ್‌ಸೆಟ್‌ಗಳು ಕೊಚ್ಚಿಕೊಂಡು ಹೋಗಿವೆ. ಲಕ್ಷಾಂತರ ರೂಪಾಯಿ ಬೆಳೆ ನಷ್ಟದ ಜತೆಗೆ ಕೃಷಿ ಉಪಕರಣಗಳಿಗೂ ಹಾನಿಯಾಗಿದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯಮಂತ್ರಿ ಭೇಟಿ ನೀಡಲಿ’ ನೆರೆ ಹಾವಳಿಯಿಂದ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎನ್ ಭೀಮುನಾಯಕ ಮನವಿ ಮಾಡಿದ್ದಾರೆ. ಬಹುತೇಕ ಎಲ್ಲಾ ಬೆಳೆಗಳು ನಷ್ಟವಾಗಿದ್ದು ಕನಿಷ್ಠ  ಮೊತ್ತದ ಪರಿಹಾರವನ್ನು ಬೆಳೆ ಕಳೆದುಕೊಂಡ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಜಮಾ ಮಾಡಬೇಕು. ಆ ನಂತರ ಬೆಳೆ ಹಾನಿ ಅಂದಾಜು ಸಮೀಕ್ಷೆ ಮಾಡಿ ಬಾಕಿ ಮೊತ್ತ ಕೊಡಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ’ ‘ನೆರೆ ಹಾಗೂ ಸಂತ್ರಸ್ತರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರವು ನಿರ್ಲಕ್ಷ್ಯ ವಹಿಸಿದೆ. ಪ್ರವಾಹದಿಂದ ಜನರು ರೈತರು ಸಂಕಷ್ಟಕ್ಕೆ ಸಿಲುಕಿದರೂ ತಕ್ಷಣದ ಪರಿಹಾರ ಕೊಡದೆ ಎನ್‌ಡಿಆರ್‌ಎಫ್‌ ನೆಪ ಹೇಳುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು. ಬಿ.ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಪ್ರವಾಹ ಬಂದಿತ್ತು. ಮನೆಗಳು ಮುಳುಗಡೆಯಾಗಿ ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ತರಿಗೆ ₹ 10 ಸಾವಿರ ತೋಟಗಾರಿಕೆ ಬೆಳೆಗಾರರಿಗೆ ₹ 30 ಸಾವಿರ ತಕ್ಷಣದ ಪರಿಹಾರವಾಗಿ ಹಣ ನೀಡಿದ್ದರು. ಆದರೆ ಈಗಿನ ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್ ನೆಪ ಮಾಡಿ ಪರಿಹಾರ ಕೊಡುತ್ತಿಲ್ಲ’ ಎಂದರು. ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸೆಪ್ಟೆಂಬರ್ 30ರಂದು ಜಿಲ್ಲೆಗೆ ಭೇಟಿ ನೀಡುವರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.