ಯಾದಗಿರಿ: ‘ಜಿಲ್ಲೆಯಲ್ಲಿನ ಜನನ–ಮರಣಗಳ ನೋಂದಣಿ ಪ್ರಕ್ರಿಯೆಯನ್ನು ಶೇಕಡ ನೂರರಷ್ಟು ಸಾಧಿಸಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಜನನ– ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ– ಮರಣ ಘಟನೆಗಳ ಕುರಿತು ನಿಗದಿತ ಸಮಯದಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ದಾಖಲು ಮಾಡಬೇಕು. ಮರಣಗಳಿಗೆ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಮರಣೋತ್ತರ ಪರೀಕ್ಷೆ ವರದಿಯನ್ನು ಸಂಬಂಧಿಸಿದ ನೋಂದಣಾಧಿಕಾರಿಗಳಿಗೆ ತಪ್ಪದೇ ಸಲ್ಲಿಸಬೇಕು’ ಎಂದರು.
‘ಗ್ರಾಮೀಣ ಪ್ರದೇಶದಲ್ಲಿ ಜರುಗುವ ಜನನ ಮರಣ ನೋಂದಣಿ ಕುರಿತು ಮಾಹಿತಿದಾರರಾದ ಅಂಗನವಾಡಿ ಕಾರ್ಯಕರ್ತೆಯರು, ನೋಂದಣಾಧಿಕಾರಿ ಹಾಗೂ ಉಪನೋಂದಣಾಧಿಕಾರಿಗಳಿಗೆ ಮಾಹಿತಿ ಹಂಚಿಕೊಳ್ಳುವಂತೆ ನೋಡಿಕೊಳ್ಳಬೇಕು. ತಾಯಿ ಮಕ್ಕಳ ಆಸ್ಪತ್ರೆ ಸೇರಿದಂತೆ ಅವಶ್ಯಕತೆಗಳಲ್ಲಿ ಸೂಕ್ತ ಜಾಗೃತಿ ಮೂಡಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಜನನ, ಮರಣಗಳೂ ನೋಂದಣಿಯಾಗಬೇಕು’ ಎಂದು ತಾಕೀತು ಮಾಡಿದರು.
‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನನ–ಮರಣ ಘಟನೆಗಳು ಘಟಿಸಿದ 30 ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಗ್ರಾ. ಪಂ ಕಾರ್ಯದರ್ಶಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳಾಗಿ ನೇಮಿಸಲಾಗಿದೆ. ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳು ಆಗಿರುತ್ತಾರೆ’ ಎಂದು ತಿಳಿಸಿದರು.
‘ಜನನ, ಮರಣ ಘಟಿಸಿದ 21 ದಿನಗಳರೊಳಗೆ ನೋಂದಣಿ ಉಚಿತವಾಗಿರುತ್ತದೆ. 22ರಿಂದ 30ದಿನಗಳ ಒಳಗಿನ ನೋಂದಣಿಗೆ ₹20, 31ರಿಂದ 365 ದಿನಗಳ ಒಳಗಿನ ನೋಂದಣಿಗೆ (ಸಕ್ಷಮ ಪ್ರಾಧಿಕಾರದ ಅನುಮತಿ ನಂತರ) ₹ 50 ಶುಲ್ಕವಿರುತ್ತದೆ. 365 ದಿನಗಳ ನಂತರ (ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ನಂತರ) ನೋಂದಣಿಗೆ ಅವಕಾಶವಿದ್ದು, ಹೆಚ್ಚುವರಿ ಪ್ರತಿಗಾಗಿ ₹ 50 ಶುಲ್ಕ ಪಡೆಯಲಾಗುತ್ತದೆ. ಇದರಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ನಾಗರಾಜ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಪ್ರಶಾಂತ ಕುಮಾರ್, ಸಹಾಯಕ ಸಾಂಖ್ಯಿಕ ಅಧಿಕಾರಿ ನಾಗರಾಜ್ ನಾಗೂರ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.