ಗುರುಮಠಕಲ್: ತಾಲ್ಲೂಕಿನ ಗಾಜರಕೋಟ ಗ್ರಾಮದ ಹೊರ ವಲಯದ ದೊಡ್ಡ ಕೆರೆಯಲ್ಲಿ ಬಾಲಕನೊಬ್ಬ ಮೃತಪಟ್ಟ ಘಟನೆ ಬುಧವಾರ ಜರುಗಿದೆ.
ಮೃತ ಬಾಲಕ ಗಾಜರಕೋಟ ಗ್ರಾಮದ ಮಹೇಶ ಹೊನ್ನಪ್ಪ (16) ಎಂದು ಗುರುತಿಸಲಾಗಿದೆ.
'ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಜರುಗುತ್ತಿದೆ. ಕಾಮಗಾರಿಯಲ್ಲಿ ಮೃತ ಬಾಲಕನ ತಾಯಿಯ ಜಾಬ್ ಕಾರ್ಡ್ ಮೇಲೆ, ತಾಯಿಗೆ ಬದಲು ಬುಧವಾರ ಬಾಲಕ ಹೋಗಿದ್ದ. ಹೂಳೆತ್ತುವ ಸಮಯದಲ್ಲಿ ಬಾಲಕ ನೀರಿನಲ್ಲಿ ಮುಳುಗಿದ್ದಾನೆ' ಎಂದು ಸ್ಥಳೀಯರು ಆರೋಪಿಸಿದರು.
ಈ ಕುರಿತು ತಾಲ್ಲೂಕು ಪಂಚಾಯಿತಿ ಇಒ ಎಸ್.ಎಸ್.ಖಾದ್ರೋಳಿ, 'ಉದ್ಯೋಗ ಖಾತರಿ ಕಾಮಗಾರಿಗೆ ಬಂದಿದ್ದ ಜಾಬ್ ಕಾರ್ಡ್ ಹೊಂದಿದವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದಾರೆ. ಜನ ಹಿಂದಿರುಗಿದ ಮೇಲೆ ಬಾಲಕ ಈಜಲು ತೆರಳಿದ ಶಂಕೆಯಿದೆ. ಮೃತ ಬಾಲಕ ಉದ್ಯೋಗ ಖಾತರಿ ಕೆಲಸಕ್ಕೆ ಬಂದಿರುವ ಕುರಿತು ಯಾವ ಮಾಹಿತಿಯೂ ಇಲ್ಲ' ಎಂದು ಪ್ರತಿಕ್ರಿಯಿಸಿದರು.
ಗುರುಮಠಕಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದ್ದು, ಅಷ್ಟರಲ್ಲೇ ಮಹೇಶ ಮೃತಪಟ್ಟಿದ್ದ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.