ADVERTISEMENT

ಅಣಬಿಯಲ್ಲಿ ಬ್ರಾಹ್ಮೀ ಶಿಲಾಶಾಸನ ಪತ್ತೆ

ಡಾ.ಎಂ.ಎಸ್. ಶಿರವಾಳ ‌ಶೋಧನೆ; ಸಂರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 2:12 IST
Last Updated 3 ಜನವರಿ 2022, 2:12 IST
ಅಣಬಿ ಗ್ರಾಮದಲ್ಲಿ ಬ್ರಾಹ್ಮೀ ಶಿಲಾ ಶಾಸನವನ್ನು ಸಂಶೋಧಕಎಂ.ಎಸ್.ಶಿರವಾಳ ಶೋಧಿಸಿದ್ದಾರೆ
ಅಣಬಿ ಗ್ರಾಮದಲ್ಲಿ ಬ್ರಾಹ್ಮೀ ಶಿಲಾ ಶಾಸನವನ್ನು ಸಂಶೋಧಕಎಂ.ಎಸ್.ಶಿರವಾಳ ಶೋಧಿಸಿದ್ದಾರೆ   

ಶಹಾಪುರ: ತಾಲ್ಲೂಕಿನ ಅಣಬಿ ಗ್ರಾಮದ ಹೊಲವೊಂದರಲ್ಲಿ ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಹಳೆಯದಾದ ಬ್ರಾಹ್ಮೀ ಶಿಲಾಶಾಸನವನ್ನು ಸಂಶೋಧಕ ಡಾ.ಎಂ.ಎಸ್. ಶಿರವಾಳ ಅವರು ಪತ್ತೆ ಮಾಡಿದ್ದರೆ.

’6 ಅಡಿ ಉದ್ದ, 3 ಅಡಿ ಅಗಲ ಮತ್ತು 1 ಅಡಿ ದಪ್ಪ ಗಾತ್ರದ ಸ್ಥಳೀಯವಾಗಿ ಲಭಿಸುವ ಸುಣ್ಣದ ಕಲ್ಲಿನ ಮೇಲೆ ಈ ಶಿಲಾಶಾಸನ ಕೊರೆಯಲಾಗಿದೆ. ಪುರಾತನ ಪ್ರಾಕೃತ ಲಿಪಿ ಹಾಗೂ ಕ್ರಿ.ಶ. 1ನೇ ಶತಮಾನದ ಬ್ರಾಹ್ಮೀ ಭಾಷೆಯಲ್ಲಿ ಈ ಶಾಸನವಿದ್ದು, ಇದರಲ್ಲಿ ತೇದಿ ದಾಖಲಿಸಿಲ್ಲ. ಹೀಗಾಗಿ ಇದರ ಖಚಿತ ಕಾಲ ನಿರ್ಣಯ
ಹೇಳುವುದು ಕಷ್ಟ’ ಎಂದು ಡಾ.ಎಂ.ಎಸ್.ಸಿರವಾಳ ತಿಳಿಸಿದರು.

‘ಶಾಸನದಲ್ಲಿ ಬಳಸಿರುವ ಪ್ರಾಕೃತ ಲಿಪಿ ಅಕ್ಷರಗಳ ಸ್ವರೂಪ ಮತ್ತು ಗಾತ್ರಗಳ ಆಧಾರದ ಮೇಲೆ ಕ್ರಿ.ಶ. 1ನೇ ಶತಮಾನದ ಆರಂಭ ಕಾಲದ ಶಾತವಾಹನರ ಕಾಲ ಘಟ್ಟದಲ್ಲಿ ಈ ಶಾಸನವನ್ನು ರಚಿಸಲಾಗಿದೆ ಎಂಬುದು ಗೊತ್ತಾಗುತ್ತದೆ‌’ ಎಂದು ಅವರು ತಿಳಿಸಿದರು.

ADVERTISEMENT

ಶಾಸನದ ಪೂರ್ಣ ಪಠ್ಯ: ಭಾರತದ ಪ್ರಮುಖ ಲಿಪಿಗಳ ಸಾಲಿನಲ್ಲಿ ಮೊದಲನೆ ಸ್ಥಾನ ಪಡೆದಿರುವ ಪ್ರಾಕೃತ ಲಿಪಿಯಲ್ಲಿ ಕೊರೆದಿರುವ ಈ ಶಿಲಾಶಾಸನವನ್ನು ಓದಿರುವ ಸಂಶೋಧಕ ಡಾ.ಎಂ.ಎಸ್.ಸಿರವಾಳ ಅವರು ಶಾಸನದ ಹೊಸಗನ್ನಡ ಪಠ್ಯದ ಪೂರ್ಣ ಪಾಠ ಒದಗಿಸಿದ್ದಾರೆ.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬದುಕಿದ್ದ ‘ಉಭಗ’ ಎಂಬ ಬೌದ್ಧ ಧರ್ಮದ ಅನುಯಾಯಿಯ ಮರಣದ ನಂತರ ಆತನ ನೆನಪಿನಲ್ಲಿ ಹಾಕಿಸಿರುವ ಬೌದ್ಧ ಸ್ಮಾರಕ ಶಿಲಾಫಲಕ ಇದಾಗಿದೆ. ಅಂದಿನ ಕಾಲದ ಬ್ರಾಹ್ಮೀ ಭಾಷೆ ಮತ್ತು ಪ್ರಾಕೃತ ಲಿಪಿ ಸ್ವರೂಪಗಳು ಈ ಶಾಸನದಿಂದ ನಮಗೆ ತಿಳಿಯುತ್ತವೆ. ಭಾಷಿಕವಾಗಿ ಶಾಸನವನ್ನುಅಧ್ಯಯನ ಮಾಡಿದಾಗ ಈ ಶಾಸನದ ಲಿಪಿಕಾರನು ಮೌರ್ಯರ ಹಾಗೂ ಶಾತವಾಹನರ ಸಂದರ್ಭದ ಲಿಪಿ ಮತ್ತು ಭಾಷೆಗಳನ್ನು ಬಳಸಿದ್ದಾನೆ. ಈವರೆಗೆ ಕರ್ನಾಟಕದಲ್ಲಿ ಸಂಶೋಧಿಸಿ ಬೆಳಕಿಗೆ ತಂದಿರುವ ಕೆಲವೇ ಕೆಲ ಬೆರಳೆಣಿಕೆಯ ಬ್ರಾಹ್ಮೀ ಭಾಷೆ ಹಾಗೂ ಪ್ರಾಕೃತಲಿಪಿಯ ಶಾಸನಗಳ ಸಾಲಿಗೆ ಮತ್ತೊಂದು ಈ ಹೊಸ ಶಾಸನ ಇದಾಗಿದೆಎನ್ನುತ್ತಾರೆ ಅವರು.

ಅಂದಿನ ಕಾಲದ ಜನ ದಾನ- ಧರ್ಮ- ದತ್ತಿ, ಪಾಪ- ಪುಣ್ಯ, ನ್ಯಾಯ ಪರಿಪಾಲನೆಯ ಬಗ್ಗೆ ಶ್ರದ್ಧೆಯುಳ್ಳವರಾಗಿದ್ದರು ಎಂಬುವುದು ಇದರಿಂದ ತಿಳಿದು ಬರುತ್ತದೆ. ಅಣಬಿಯು ಬೌದ್ಧ ಶಿಲಾಫಲಕಗಳನ್ನು ತಯಾರಿಸುವ ಪ್ರಮುಖ ಬೌದ್ಧ ಧಾರ್ಮಿಕ ಕೇಂದ್ರವಾಗಿತ್ತು ಎಂದು ಅವರು ವಿಶ್ಲೇಷಿಸಿದ್ದಾರೆ.

ಸನ್ನತಿ ಪರಿಸರದ ಬೌದ್ಧ ಸ್ಮಾರಕಗಳ ಸಂಶೋಧನೆ ಹಾಗೂ ಸಂರಕ್ಷಣೆಗಾಗಿ ಸರ್ಕಾರ ಪರಿಶ್ರಮಿಸುತ್ತಿರುವಂತೆ ಅಣಬಿ, ಸಿರವಾಳ, ಹೊಸೂರು, ಹುರಸಗುಂಡಗಿಗಳಲ್ಲಿನ ಬೌದ್ಧ ಸ್ಮಾರಕಗಳ ಸಂಶೋಧನೆ ಕೈಗೊಂಡರೆ ಇತಿಹಾಸದ ಮೇಲೆ ಇನ್ನೂ ಹೆಚ್ಚು ಬೆಳಕು ಚೆಲ್ಲಬಹುದು ಎಂದು ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಶಾಸನ ಸಂಶೋಧನಾ ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಎಂ.ಎಸ್.ರೋಹಿಣಿ, ಶರಣಬಸಪ್ಪ ಸಿರವಾಳ, ಎಂ.ಎಸ್. ವೆಂಕಟ ಸಾಯಿ, ಎಂ.ಎಸ್. ಶ್ರೀನಿವಾಸ್, ಎಂ.ಎಸ್. ಬಾಲಾಜಿ, ಎಚ್.ಎಂ. ಪತ್ತಾರ, ಹಣಮಂತ ಸೀರನೆತ್ತಿ , ಮೋದಿನ ಪಟೇಲ್ ಅವರ ನೆರವನ್ನು ಸಂಶೋಧಕರು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.