ADVERTISEMENT

ಮೈದುಂಬಿದ ಬ್ಯಾರೇಜ್‌: ಪ್ರವಾಹ ನೀರು ಸದ್ಬಳಕೆಗೆ ರೈತರ ಒತ್ತಾಯ

ಟಿ.ನಾಗೇಂದ್ರ
Published 23 ಸೆಪ್ಟೆಂಬರ್ 2020, 2:13 IST
Last Updated 23 ಸೆಪ್ಟೆಂಬರ್ 2020, 2:13 IST
ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ನಿರ್ಮಿಸಿರುವ ಸನ್ನತಿ ಬ್ರೀಜ್ ಕಂ ಬ್ಯಾರೇಜ್
ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ನಿರ್ಮಿಸಿರುವ ಸನ್ನತಿ ಬ್ರೀಜ್ ಕಂ ಬ್ಯಾರೇಜ್   

ಶಹಾಪುರ: ತಾಲ್ಲೂಕಿನಲ್ಲಿ ಭೀಮಾ ನದಿಗೆ ನಿರ್ಮಿಸಿರುವ ಸನ್ನತಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಪ್ರವಾಹದಿಂದ ಭರ್ತಿಯಾಗಿದೆ.

ಭೀಮಾ ನದಿ ದಂಡೆಯಲ್ಲಿ ಶಹಾಪುರ ತಾಲ್ಲೂಕಿನಲ್ಲಿ 10 ಗ್ರಾಮಗಳು ಬರುತ್ತವೆ.

‘ಬ್ಯಾರೇಜ್ ನಿರ್ಮಾಣ ಮಾಡಿದ್ದೆ ದೊಡ್ಡ ಸಾಧನೆಯಾಗಿದೆ. ಸಂಪೂರ್ಣವಾಗಿ ನೀರು ಸದ್ಬಳಕೆ ಮಾಡಿಕೊಳ್ಳುವಲ್ಲಿ ರೈತರು ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಸೋತು ಹೋಗಿದ್ದೇವೆ. ಸಾಕಷ್ಟು ನೀರಿನ ಲಭ್ಯತೆ ಇರುವಾಗ ಅದನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲವಾಗಿದೆ. ಅಲ್ಲದೆ ಪ್ರವಾಹದಿಂದ ಹೆಚ್ಚಿನ ನೀರು ಬಂದಾಗ ಬ್ಯಾರೇಜ್ ಅಕ್ಕಪಕ್ಕದ ಗ್ರಾಮಗಳ ಕೆರೆ, ಕಲ್ಯಾಣಿಗಳಿಗೆ ನೀರು ತುಂಬಿಸಿಕೊಂಡರೆ ಇನ್ನಷ್ಟು ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

ADVERTISEMENT

‘ಅಂದಿನ ನೀರಾವರಿ ಸಚಿವ ಎಚ್.ಕೆ.ಪಾಟೀಲ ಹಾಗೂ ಮಾಜಿ ಸಚಿವ ಎ.ಬಿ.ಮಾಲಕರಡ್ಡಿಯವರ ಅವಿರತ ಪ್ರಯತ್ನದ ಫಲವಾಗಿ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಐತಿಹಾಸಿಕ ಚಂದ್ರಲಾಂಬ ಪರಮೇಶ್ವರಿ ದೇವಸ್ಥಾನದ ಸನ್ನಿಧಿಗೆ ಹೊಂದಿಕೊಂಡಂತೆ ₹200 ಕೋಟಿಗೂ ಅಧಿಕ ವೆಚ್ಚದಲ್ಲಿ ಸನ್ನತಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣಗೊಂಡಿತು. ಬ್ಯಾರೇಜಿನ ಉದ್ದ 665 ಮೀಟರ್, 4 ಟಿ.ಎಂ.ಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. 17,000 ಹೆಕ್ಟೇರ್ ನೀರಾವರಿ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿದ್ದು, ಚಿತ್ತಾಪುರ ತಾಲ್ಲೂಕಿನ 8 ಹಾಗೂ ಯಾದಗಿರಿಯ 19 ಗ್ರಾಮಗಳಿಗೆ ನೀರಿನ ಲಭ್ಯವಾಗುತ್ತದೆ. ಈಗ ಭೀಮಾ ನದಿಯ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ 27 ಗೇಟ್ ಮೂಲಕ ನದಿಗೆ ನೀರು ಹರಿಬಿಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಬ್ಯಾರೇಜ್‌ಗಳಿಗೆ ಸೂಕ್ತ ಸೌಕರ್ಯವನ್ನು ನೀಡಬೇಕು. ಅಗತ್ಯ ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂದು ಬ್ಯಾರೇಜ್ ಪಾತ್ರದ ರೈತರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.