ADVERTISEMENT

ನಾರಾಯಣಪುರ: ಶಂಕರಲಿಂಗೇಶ್ವರ, ಮಹಿಬೂಬಸುಬಾನಿ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 7:02 IST
Last Updated 30 ಆಗಸ್ಟ್ 2023, 7:02 IST
ನಾರಾಯಣಪುರ ಸಮೀಪದ ಶಂಕರಲಿಂಗೇಶ್ವರ ದೇವಸ್ಥಾನ ಹಾಗೂ ಮಹಿಬೂಬಸುಬಾನಿ ದರ್ಗಾದ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಎತ್ತುಗಳ ತೇರಬಂಡಿ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆಯಿತು
ನಾರಾಯಣಪುರ ಸಮೀಪದ ಶಂಕರಲಿಂಗೇಶ್ವರ ದೇವಸ್ಥಾನ ಹಾಗೂ ಮಹಿಬೂಬಸುಬಾನಿ ದರ್ಗಾದ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಎತ್ತುಗಳ ತೇರಬಂಡಿ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆಯಿತು   

ನಾರಾಯಣಪುರ: ಸಮೀಪದ ಬೋರುಕಾ ಜಲವಿದ್ಯುತ್ ಘಟಕದ ರಸ್ತೆಯ ಬಳಿಯ ಶಂಕರಲಿಂಗೇಶ್ವರ ಹಾಗೂ ಸೂಫಿಸಂತ ಮಹಿಬೂಬ ಸುಬಾನಿ ದರ್ಗಾದ ಜಾತ್ರೆ ಮಂಗಳವಾರ ಸಂಭ್ರಮದಿಂದ ಜರುಗಿತು.

ಜಾತ್ರೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಗಂಧದ ಮೆರವಣಿಗೆಯೊಂದಿಗೆ ದರ್ಗಾಕ್ಕೆ ಆಗಮಿಸಿದ ಭಕ್ತರು, ಬಳಿಕ ಮಹಿಬೂಬ ಸುಬಾನಿ ದರ್ಗಾಕ್ಕೆ ಗಂಧ ಹಚ್ಚುವ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಭಾಗ್ಯವಂತಿ ದೇವಿಯ ಕಲಹಳ್ಳಿ ನಾಟ್ಯ ಸಂಘದವರಿಂದ ಘತ್ತರಗಿ ಭಾಗ್ಯಮ್ಮ ಭಕ್ತಿ ಪ್ರಧಾನ ನಾಟಕ ಪ್ರದರ್ಶಿಸಲಾಯಿತು.

ಬೆಳಿಗ್ಗೆ ಶಂಕರಲಿಂಗೇಶ್ವರರ ಮೂರ್ತಿಗೆ ದಾನಯ್ಯ ಗುರುಗಳಿಂದ ರುದ್ರಾಭಿಷೇಕ ನಡೆಯಿತು. ಬಳಿಕ ಇಲ್ಲಿನ ಅಂಬಾಭವಾನಿ ದೇಗುಲದಿಂದ ವಿವಿಧ ಮಠಗಳ ಶರಣರು, ಶರಣೆಯರು ಆಸೀನರಾಗಿದ್ದ ಸಾರೋಟ ವಾಹನದ ಮೆರವಣಿಗೆಯಲ್ಲಿ ಕುದುರೆ ಕುಣಿತ, ವಾದ್ಯಮೇಳ, ಕುಂಭಕಳಸ ಗಮನ ಸೆಳೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಮಠಕ್ಕೆ ಆಗಮಿಸಿದ ಬಳಿಕ ಮಠದಲ್ಲಿನ ಈಶ್ವರ ಲಿಂಗಕ್ಕೆ ಪೂಜೆ ನೆರವೇರಿಸಲಾಯಿತು. ಭಕ್ತರು ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.

ADVERTISEMENT

ಎತ್ತುಗಳ ತೇರಬಂಡಿ ಓಟ

ಜಾತ್ರೆ ಅಂಗವಾಗಿ ಎತ್ತುಗಳ ತೇರಬಂಡಿ ಓಟದ ಸ್ಪರ್ಧೆ ಜರುಗಿತು. ಸ್ಪರ್ಧೆಗೆ ಕೊಡೇಕಲ್ಲ ಮಹಲಿನಮಠದ ವೃಷಬೇಂದ್ರ ಸ್ವಾಮೀಜಿ, ಶಂಕರಲಿಂಗ ಮಹಾರಾಜರು ಚಾಲನೆ ನೀಡಿದರು. ಬಳಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 23 ಜೋಡೆತ್ತುಗಳು ತೇರಬಂಡಿ ಓಟ ಸ್ಪರ್ಧೆಯಲ್ಲಿ ಶಕ್ತಿ ಪ್ರದರ್ಶಿಸಿ ನೋಡುಗರ ಗಮನ ಸೆಳೆದವು.

ಚನ್ನಮಲ್ಲಪ್ಪ ಶರಣರು, ಮಲ್ಲಿಕಾರ್ಜುನ ಶರಣರು, ಪ್ರಮುಖರಾದ ತಿಪ್ಪಣ್ಣ ರೋಡಲಬಂಡಾ, ಚಿನ್ನಪ್ಪ ಡೊಳ್ಳಿ, ಬಾಲಯ್ಯ ಗುತ್ತೇದಾರ, ದ್ಯಾವಣ್ಣಗೌಡ, ಮಲ್ಲಿಕಾರ್ಜುನ ಶೃಂಗೇರಿ, ವೈ.ಸಿ.ಗೌಡರ, ಶಿವು ಬಿರಾದಾರ, ಆಂಜನೇಯ ದೊರೆ, ಆರ್.ಸಿ. ಗೌಡರ, ರಮೇಶ ಕೋಳೂರ, ಯಂಕಪ್ಪ ರೋಡಲಬಂಡಾ, ಹುಲಗಪ್ಪ ಭಜಂತ್ರಿ, ಮಂಜು ಹಾದಿಮನಿ, ಗದ್ದೆಪ್ಪ ಮೇಲಿನಮನಿ, ಸಾಹೇಬಣ್ಣ, ಗದ್ದೆಪ್ಪ ಕಟ್ಟಿಮನಿ, ಮಾರುತಿ, ಜೆಟ್ಟೆಪ್ಪ ಗೊಳಸಂಗಿ, ಜಾವೀದ್ ಇದ್ದರು.

ನಾರಾಯಣಪುರದಲ್ಲಿ ಶಂಕರಲಿಂಗೇಶ್ವರ ದೇವಸ್ಥಾನ ಹಾಗೂ ಮಹಿಬೂಬಸುಬಾನಿ ದರ್ಗಾದ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಎತ್ತುಗಳ ತೇರಬಂಡಿ ಸ್ಪರ್ಧೆಗೆ ವೃಷಬೇಂದ್ರ ಸ್ವಾಮೀಜಿ ಶಂಕರಲಿಂಗ ಮಹಾರಾಜರು ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.