ಯಾದಗಿರಿ: ಜಾತಿಗಣತಿ (ಆರ್ಥಿಕ, ಸಾಮಾಜಿಕ ಗಣತಿ) ಮರಳಿ ವೈಜ್ಞಾನಿಕವಾಗಿ ಮಾಡುವಂತೆ ಹೈಕಮಾಂಡ್ ಸೂಚನೆ ನೀಡಿರುವುದು ಅತ್ಯಂತ ಸೂಕ್ತ ಕ್ರಮವಾಗಿದ್ದು, ಇದರಿಂದ ರಾಜ್ಯದಲ್ಲಿ ನಿಷ್ಠೆಯಿಂದ ಪಕ್ಷ ಕಟ್ಟಿದ ಹಾಗೂ ಕಟ್ಟುವವರಿಗೆ ಮಾನ್ಯತೆ ನೀಡಿದಂತಾಗಿದೆ ಎಂದು ಕಿಸಾನ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಮಾಣಿಕರಡ್ಡಿ ಕುರುಕುಂದಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಪ್ರಬಲ ಹಾಗೂ ಇನ್ನಿತರ ಸಣ್ಣ ಪುಟ್ಟ ಹಿಂದುಳಿದ ವರ್ಗಗಳ ಸಮುದಾಯದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಮಾಡಿದ ಮನವಿ ಹಿನ್ನೆಲೆಯಲ್ಲಿ ಅವರು ಹೈಕಮಾಂಡ್ ಮಟ್ಟದಲ್ಲಿ ಅದನ್ನು ಮಂಡಿಸಿದ್ದರು. ಈಗ ಅದನ್ನು ಹೈಕಮಾಂಡ್ ಮಾನ್ಯ ಮಾಡಿದಂತಾಗಿದೆ. ಇದರಿಂದ ಉಪಮುಖ್ಯಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ ಅವರ ಸಾಮರ್ಥ್ಯ ಮತ್ತೊಮ್ಮೆ ಸಾಬೀತಾದಂತಾಗಿದ್ದು, ಸಾಮಾಜಿಕ ನ್ಯಾಯದ ಪರವಾಗಿರುವ ಮತ್ತು ವಾಸ್ತವಿಕ ಸತ್ಯದ ಪರವಾಗಿರುವ ಡಿಕೆಶಿ ಅವರಿಗೆ ಹೈಕಮಾಂಡ್ ಹೆಚ್ಚಿನ ಜವಬ್ದಾರಿ ತಕ್ಷಣ ನೀಡಿದಲ್ಲಿ ರಾಜ್ಯದಲ್ಲಿ ಪಕ್ಷ ಇನ್ನಷ್ಟು ಬಲಿಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಜಾತಿ ಗಣತಿಯಲ್ಲಿ ರಾಜ್ಯದ ಜನರ ಭಾವನೆಯನ್ನು ಸಮಚಿತ್ತದಿಂದ ಸಹಾನುಭೂತಿಯಿಂದ ವಾಸ್ತವಿಕ ಅಂಶವನ್ನು ಪರಿಗಣಿಸಿದ ರಾಹುಲಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಸೇರಿದಂತೆ ವರಿಷ್ಠ ಮಂಡಳಿ ಸೂಕ್ತ ನಿರ್ಣಯ ಕೈಗೊಂಡಿದೆ. ಇದರಿಂದ ರಾಜ್ಯದಲ್ಲಿ ಎಲ್ಲ ಸಮುದಾಯಗಳ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ರೀತಿಯ ನಿರ್ಣಯಗಳನ್ನು ಕೈಗೊಂಡು ಪಕ್ಷವನ್ನು ಮತ್ತು ರಾಜ್ಯವನ್ನು ಮುನ್ನಡೆಸುವ ನಾಯಕತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ. ಇದನ್ನು ಹೈಕಮಾಂಡ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.