ಹುಣಸಗಿ: ತಾಲ್ಲೂಕಿನಲ್ಲಿ ಕೈಗೊಳ್ಳಲಾಗುತ್ತಿರುವ ಜೆಜೆಎಂ ಹಾಗೂ ಜಲಧಾರೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವಿಶ್ ಓರಡಿಯಾ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ದ್ಯಾಮನಹಾಳ, ರಾಜವಾಳ ಮತ್ತಿತರ ಗ್ರಾಮಗಳಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ನಲ್ಲಿ ಹಾಗೂ ಪೈಪ್‌ಗಳು ಹಾಳಾಗಿರುವುದನ್ನು ಗಮನಿಸಿ, ಕಾಮಗಾರಿಯ ಗುಣಮಟ್ಟ ಕಾಪಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹೇಳಿದರು.
ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಎಚ್.ಡಿ ಪಾಟೀಲ ಅವರಿಗೆ ಸೂಚಿಸಿದರು.
ದ್ಯಾಮನಾಳ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರು ಪೊರೈಕೆ ನಲ್ಲಿಗಳ ಜೊತೆಗೆ ವೈಯಕ್ತಿಕ ಶೌಚಾಲಯ ಬಳಸದಿರುವುದನ್ನು ಕಂಡು ಮಹಿಳೆಯರನ್ನು ವಿಚಾರಿಸಿ, ‘ಶೌಚಾಲಯವನ್ನು ಬಳಸಿಕೊಳ್ಳಬೇಕು’ ಎಂದು ತಿಳಿ ಹೇಳಿದರು. ಈ ಕುರಿತು ಜಾಗೃತಿಗಾಗಿ ಮಾಳನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಸವಣ್ಣಯ್ಯ ಉಮಚಿಮಠ ಅವರಿಗೆ ಸೂಚಿಸಿದರು.
ಗ್ರಾಮಸ್ಥರ ಮನವಿ: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸಲು ನಮ್ಮೂರಿನಲ್ಲಿ ಗ್ರಂಥಾಲಯ ಕಲ್ಪಿಸಿಕೊಡಬೇಕು. ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಅದು ಬಹಳ ದಿನಗಳಿಂದ ಕೆಟ್ಟು ನಿಂತಿದೆ. ಅದನ್ನು ರಿಪೇರಿ ಮಾಡಿಸಿ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಗ್ರಂಥಾಲಯಕ್ಕೆ ಸ್ಥಳಾವಕಾಶ ಇದ್ದರೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಇಒ ಭರವಸೆ ನೀಡಿದರು.
ತಾ.ಪಂ. ಇಒ ಬಸಣ್ಣನಾಯಕ, ಎಇಇ ಎಚ್.ಡಿ. ಪಾಟೀಲ ಹಾಗೂ ಮೌನೇಶಗೌಡ ಮೇಟಿ, ಗ್ರಾ.ಪಂ. ಸದಸ್ಯರಾದ ನಾನಗೌಡ ಪೊಲೀಸ್ ಪಾಟೀಲ, ಪ್ರಭುದೇವ ಹಾಗೂ ನಿಂಗಪ್ಪ ದೇವರಮನಿ, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.