ADVERTISEMENT

ಚಾಮನಳ್ಳಿ: ಕೊಡ ನೀರಿಗಾಗಿ ಯುವಕರು, ಮಹಿಳೆಯರು, ಮಕ್ಕಳು ಹಗಲು- ರಾತ್ರಿ ಪರದಾಟ

ತೋಟೇಂದ್ರ ಎಸ್ ಮಾಕಲ್
Published 6 ಏಪ್ರಿಲ್ 2021, 4:28 IST
Last Updated 6 ಏಪ್ರಿಲ್ 2021, 4:28 IST
ಯರಗೋಳ ಸಮೀಪದ ಚಾಮನಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರು
ಯರಗೋಳ ಸಮೀಪದ ಚಾಮನಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರು   

ಚಾಮನಳ್ಳಿ (ಯರಗೋಳ): ಇಲ್ಲಿನ ಬಂದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ. ಕೊಡ ನೀರಿಗಾಗಿ ಗ್ರಾಮದ ಯುವಕರು, ಮಹಿಳೆಯರು, ಮಕ್ಕಳು ಹಗಲು- ರಾತ್ರಿ ಪರದಾಡುವಂತಾಗಿದೆ.

ಗ್ರಾಮದಲ್ಲಿ 250 ಮನೆಗಳು, 1,500 ಜನಸಂಖ್ಯೆ, 4 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.

ಬಿಸಿಲಿನ ತಾಪ, ಕೊರೊನಾ ಆತಂಕದ ನಡುವೆಯೂ ಅಂತರ ಮರೆತ ಗ್ರಾಮಸ್ಥರು ಗ್ರಾಮದಲ್ಲಿರುವ ಕೈ ಪಂಪ್‌ ಮುಂದೆ ನೀರಿಗಾಗಿ ಮುಗಿಬೀಳುತ್ತಿದ್ದಾರೆ.

ADVERTISEMENT

ನೀರಿನ ಸಮಸ್ಯೆ ಕುರಿತು ಪಂಚಾಯಿತಿ ಅಧ್ಯಕ್ಷರಿಗೆ, ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಕಾಣುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

‘ಮನೆಯ ಸದಸ್ಯರಿಗೆ ಅಡುಗೆ ಮಾಡಲು ಆಗುತ್ತಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ನೀರಿಗಾಗಿ ಜಗಳವಾಡಬೇಕು, ಅಕ್ಕಪಕ್ಕದವರ ಜೊತೆ ಅನ್ಯೋನ್ಯವಾಗಿರಲು ಆಗುತ್ತಿಲ್ಲ’ ಎಂದು ಗ್ರಾಮದ ದುರ್ಗಮ್ಮ ನೋವು ತೋಡಿಕೊಂಡರು.

ಯುವಕ ಸಾಬರೆಡ್ಡಿ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಕೈ ಪಂಪ್‌ಗಳಲ್ಲಿ ಬರುವ ನೀರು ಉಪ್ಪಾಗಿದ್ದು, ಬೇಸಿಗೆಯ ದಾಹ ತೀರಿಸಿಕೊಳ್ಳಲು ಅನಿವಾರ್ಯವಾಗಿ ಶುದ್ಧವಲ್ಲದ ನೀರು ಕುಡಿಯಬೇಕಾಗಿದೆ’ ಎಂದರು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ಗಲೀಜಾಗಿದೆ. ಶೌಚಾಲಯಗಳ ಬಳಕೆಯ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಬೇಕೆಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಬಂದಳ್ಳಿ: ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಂಥಾಲಯದ ಬಾಗಿಲು ಮುಚ್ಚಿದ್ದು, ಇದರಿಂದ ನೂರಾರು ಸಂಖ್ಯೆಯ ಓದುಗರಿಗೆ ತೊಂದರೆಯಾಗಿದೆ ಎಂದು ಕಾಲೇಜು ವಿದ್ಯಾರ್ಥಿಗಳು ಹೇಳಿದರು.

***

ಗ್ರಾಮದಲ್ಲಿ ಕಳೆದ 6 ತಿಂಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯುತ್ತಿಲ್ಲ
ಮುದಕಪ್ಪ ಚಾಮನಳ್ಳಿ, ಗ್ರಾಮಸ್ಥ

***

ತಾಂತ್ರಿಕ ಸಮಸ್ಯೆಗಳಿಂದ ಟ್ಯಾಂಕ್ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಪರ್ಯಾಯ ವ್ಯವಸ್ಥೆ ಮೂಲಕ ಗ್ರಾಮಸ್ಥರಿಗೆ ನೀರು ತಲುಪಿಸುತ್ತೇವೆ
ವಿಜಯಲಕ್ಷ್ಮಿ, ಬಂದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.