
ಗುರುಮಠಕಲ್: ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಮತ್ತೆ ‘ಚಿರತೆ ಸದ್ದು’ ಕೇಳಿ ಬರುತ್ತಿದ್ದು, ಜನರಲ್ಲಿ ಭೀತಿಯನ್ನುಂಟು ಮಾಡಿದೆ.
ಹತ್ತಿರದ ಚಪೆಟ್ಲಾ ಗ್ರಾಮದಲ್ಲಿ ಗುರುವಾರ(ನ.6) ಸಂಜೆ ವೇಳೆ ಭೀಮಶಪ್ಪ ಅದಗಲ್ ಅವರು ಎತ್ತುಗಳನ್ನು ಮೇಯಿಸುತ್ತಿದ್ದರು. ದಿಢೀರನೆ ಎತ್ತುಗಳು ಕಿರುಚುತ್ತಾ ಓಡಲಾರಂಭಿಸಿದವು. ಸ್ವಲ್ಪ ದೂರದಲ್ಲಿದ್ದ ಭೀಮಶಪ್ಪ ಅವರು ಎತ್ತುಗಳತ್ತ ನೋಡಿದಾಗ ಚಿರತೆ ಕಂಡಿದೆ.
‘ಎತ್ತುಗಳು ದಿಕ್ಕಾಪಾಲಾಗಿ ಓಡಿದ್ದರಿಂದ ನಾನು ಅತ್ತ ನೋಡಿದೆ. ದೊಡ್ಡ ಕುರಿಗಿಂತ ಸ್ವಲ್ಪ ದೊಡ್ಡದಾದ ಹುಲಿ (ಚಿರತೆ) ಕಂಡಿತು. ಕೂಡಲೇ ನಾನೂ ಭಯಗೊಂಡು ಮನೆಗೆ ಹಿಂತಿರುಗಿದೆ. ಅತಿವೃಷ್ಟಿಯಿಂದ ಪೊದೆಗಳು ದಟ್ಟವಾಗಿ ಬೆಳೆದಿದ್ದು, ಅದು ಎತ್ತ ಹೋಯಿತು ಮತ್ತು ಎಲ್ಲಿ ಅಡಗಿದೆ ಎನ್ನುವುದು ತಿಳಿಯಲಿಲ್ಲ’ ಎಂದು ಭೀಮಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿರತೆ ಇರುವ ಕುರಿತು ತಿಳಿಯುತ್ತಲೇ ಗುರುವಾರ ಸಂಜೆ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಚಪೆಟ್ಲಾ ಗ್ರಾಮಕ್ಕೆ ದೌಡಾಯಿಸಿದರು. ಭೀಮಶಪ್ಪ ಅದಗಲ್ ಅವರಿಗೆ ಚಿರತೆ ಕಾಣಿಸಿದ ಪ್ರದೇಶದಲ್ಲಿ ಹೆಜ್ಜೆ ಗುರುತುಗಳನ್ನು ಹುಡುಕಿದರು. ಆದರೆ, ದಟ್ಟವಾಗಿ ಬೆಳೆದಿದ್ದ ಹುಲ್ಲು ಮತ್ತು ಕತ್ತಲಿನ ಕಾರಣ ಹೆಜ್ಜೆ ಗುರುತುಗಳು ಪತ್ತೆಯಾಗಿರಲಿಲ್ಲ.
ಗುರುವಾರ ಚಪೆಟ್ಲಾ ಹೊರವಲಯದಲ್ಲಿ ಚಿರತೆ ಕಂಡಿತ್ತು. ಶುಕ್ರವಾರ ಚಪೆಟ್ಲಾ ಹೊರವಲಯದ ಗುರುಮಠಕಲ್ ಮಾರ್ಗದಲ್ಲಿನ ಜಮೀನಿನಲ್ಲಿ ರೈತರಿಗೆ ಹೆಜ್ಜೆ ಗುರುತುಗಳು ಕಂಡಿವೆ. ಕೂಡಲೇ ಅರಣ್ಯ ಇಲಾಖೆಗೆ ಹೆಜ್ಜೆ ಗುರುತುಗಳ ಚಿತ್ರಗಳನ್ನು ಕಳುಹಿಸಿದ್ದಾರೆ. ಅವು ಚಿರತೆಯದ್ದೇ ಹೆಜ್ಜೆ ಗುರುತುಗಳು ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ.
ಕೃಷಿ ಚಟುವಟಿಕೆಗೆ ಹಿನ್ನಡೆ: ಗ್ರಾಮದ ಹೊರವಲಯದ ವಿವಿಧೆಡೆ ಚಿರತೆ ಸಂಚಾರದ ಕುರಿತು ತಿಳಿದ ನಂತರ ಗ್ರಾಮದಲ್ಲಿ ಭಯ ಕವಿದಿದ್ದು, ತೊಗರಿ ಬೆಳೆಗೆ ಕೀಟನಾಶಕ ಸಿಂಪಡಣೆ ಸೇರಿದಂತೆ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ.
ಕೀಟ ನಾಶಕ ಸಿಂಪಡಣೆ ಮಾಡಲು ಜನ ಬರುತ್ತಿಲ್ಲ. ‘ಹುಲಿ ಸುತ್ತಾಡುತ್ತಿದೆ, ದಾಳಿ ಮಾಡಿದರೆ’ ಎನ್ನುವ ಭೀತಿಯ ಕಾರಣ ಹೊಲಗಳಿಗೆ ಕೃಷಿ ಕಾರ್ಮಿಕರು ಬರಲೊಲ್ಲರು. ಜತೆಗೆ ನಮಗೂ ಜನರನ್ನು ಕರೆದೊಯ್ಯಲು ಭಯವಾಗುತ್ತಿದೆ. ಇದರಿಂದಾಗಿ ಅಳಿದುಳಿದ ಬೆಳೆಯೂ ಕೀಟಗಳ ಪಾಲಾಗುವ ಸಾಧ್ಯತೆಯಿದೆ ಎನ್ನುವುದು ರೈತರ ಅಳಲು.
ಬೋನಿಗೆ ಸಿಗವು: ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಅಳವಡಿಸುವ ಬೋನಿನಲ್ಲಿ ಚಿರತೆ ಸೇರೆಯಾಗುತ್ತಿಲ್ಲ. ಎಷ್ಟೇ ಕಾದರೂ ಬೋನು ಅಳವಡಿಸಿದತ್ತ ಚಿರತೆ ಬಾರವು. ಕೆಲ ದಿನಗಳಲ್ಲೇ ಮತ್ತೊಂದೆಡೆ ಕಾಣುತ್ತಿವೆ.
ತಾಲ್ಲೂಕಿನಲ್ಲಿ ಕೆಲ ವರ್ಷಗಳ ಹಿಂದೆ ಮಿನಾಸಪುರ ನಂತರ ಚಂಡರಿಕಿ ಮತ್ತು ಕಳೆದ ತಿಂಗಳು ಎಂ.ಟಿ.ಪಲ್ಲಿ(ಮಿಟ್ಟ ತಿಪಡಂಪಲ್ಲಿ) ಗ್ರಾಮಗಳಲ್ಲಿ ಚಿರತೆಯನ್ನು ಸೆರೆಹಿಡಿದು, ಸ್ಥಳಾಂತರಿಸಲೆಂದು ಬೋನು ಅಳವಡಿಸಲಾಗಿತ್ತು. ಆದರೆ, ಚಿರತೆ ಮಾತ್ರ ಸೆರೆಯಾಗಲಿಲ್ಲ ಎಂದು ಆಯಾ ಗ್ರಾಮಸ್ಥರು ನೆನಪಿಸಿಕೊಂಡರು.
ತಾಲ್ಲೂಕಿನಲ್ಲಿ ಪದೇ ಪದೆ ಚಿರತೆ ಕಾಣಿಸುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ಮಿನಾಸಪುರದಲ್ಲಿ ಮೀನುಗಾರರ ಮೇಲೆ ದಾಳಿ ಮಾಡಿತ್ತು. ಈಗ ನಮ್ಮೂರಿಗೆ ಬಂದಿದ್ದು ಭಯವಾಗುತ್ತಿದೆಭೀಮರೆಡ್ಡಿ ಚನ್ನಮ್ಮೋಳ ಚಪೆಟ್ಲಾ ಗ್ರಾಮಸ್ಥ
ಚಪೆಟ್ಲಾ ಗ್ರಾಮದಲ್ಲಿ ಚಿರತೆ ಸಂಚಾರದ ಹೆಜ್ಜೆ ಜಾಡುಗಳನ್ನು ಪರಿಶೀಲಿಸಿ ಬೋನು ಅಳವಡಿಸುತ್ತೇವೆ. ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದುಸಂಗಮೇಶ ಪಾಟೀಲ ಸಹಾಯಕ ಅರಣ್ಯಾಧಿಕಾರಿ
ಗುರುವಾರ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ತಿಳಿದ ತಕ್ಷಣ ಗ್ರಾಮ ಪಂಚಾಯಿತಿಯ ವಾಹನದಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸಲಾಗಿದೆರಾಧಿಕಾ ಎಸ್.ಸಿ. ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.