ವಡಗೇರಾ: ತಾಲ್ಲೂಕು ಕೇಂದ್ರವಾಗಿ 8 ವರ್ಷ ಕಳೆದ ನಂತರ ವಡಗೇರಾ ಪಟ್ಟಣದಲ್ಲಿ ಪ್ರಜಾಸೌಧ ( ಮಿನಿ ವಿಧಾನಸೌಧ) ನಿರ್ಮಾಣಕ್ಕೆ ಕಾಲಕೂಡಿ ಬಂದಿದೆ.
2018ರಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ರಾಜ್ಯದಲ್ಲಿ 44 ನೂತನ ತಾಲ್ಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ ವಡಗೇರಾ ಸಹ ಒಂದು.
ಜಮೀನು ಮಂಜೂರು: ಈಗಾಗಲೇ ಕಂದಾಯ ಇಲಾಖೆಯವರು ತುಮಕೂರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಇರುವ ಮೊರಾರ್ಜಿ ವಸತಿ ಶಾಲೆಯ ಪಕ್ಕದಲ್ಲಿ ಸ.ನಂ.581 ರಲ್ಲಿ 9 ಎಕರೆ ಜಮೀನನ್ನು 2021 ರಲ್ಲಿ ಕಂದಾಯ ಇಲಾಖೆಯಿಂದ ಮಂಜೂರು ಆಗಿದೆ. ಪಹಣಿಯಲ್ಲಿಯು ಸಹ ಮಿನಿ ವಿಧಾನಸೌಧ ( ತಾಲ್ಲೂಕು ಸಂಕೀರ್ಣ) ನಿರ್ಮಾಣಕ್ಕೆ ಮಂಜೂರು ಎಂದು ನಮೂದಿಸಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಜಿ ಶಾಸಕರಾದ ವೆಂಕಟರಡ್ಡಿ ಮುದ್ನಾಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಒತ್ತಡ ಹಾಕಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ₹10 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದರು. ಆದರೆ ಈ ಹಣ ಸಾಕಾಗುವುದಿಲ್ಲ ಎಂದು ವಡಗೇರಾದಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾದ ಮಿನಿವಿಧಾನ ಸೌಧ ನಿರ್ಮಿಸಲಾಗುವುದು. ಅದಕ್ಕಾಗಿ ಇನ್ನೂ ₹10 ಕೋಟಿ ಮಂಜೂರು ಮಾಡಿ‘ ಎಂದು ಆಗಿನ ಶಾಸಕ ಮುದ್ನಾಳ ಮುಖ್ಯಮಂತ್ರಿಯವರ ಹತ್ತಿರ ಮನವಿ ಮಾಡಿದ್ದರು.
ಇದಕ್ಕೂ ಸಹ ಬೊಮ್ಮಾಯಿ ಸಮ್ಮತಿಸಿದ್ದರು. ಹಾಗೆಯೆ ಭೂಮಿ ಪೂಜೆಯನ್ನು ಮಾಡಲು ಬರುತ್ತೇನೆ ಎಂದು ಭರವಸೆಯನ್ನು ಸಹ ಕೊಟ್ಟಿದ್ದರು. ಆದರೆ ವಿವಿಧ ಕಾರಣಗಳಿಂದಾಗಿ ಮಿನಿ ವಿಧಾನಸೌಧ ನಿರ್ಮಾಣದ ಕಾಮಗಾರಿ ನನೆಗುದಿಗೆ ಬಿದ್ದಿತು. ಬಂದ ಅನುದಾನವು ಸರ್ಕಾರಕ್ಕೆ ಮರಳಿ ಹೋಯಿತು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕ ತುನ್ನೂರ ಅವರು ಪ್ರಜಾಸೌಧದ ನಿರ್ಮಾಣಕ್ಕೆ ಶೀಘ್ರದಲ್ಲಿಯೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆ ಭರವಸೆ ಈಡೇರುವ ಕಾಲ ಈಗ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.