ಶಹಾಪುರ: ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ವಕೀಲ ರಾಜೇಶ ಕಿಶೋರ್ ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ದಲಿತಪರ ಸಂಘಟನೆ ಹಾಗೂ ವಕೀಲರ ಸಂಘ ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಬಸವೇಶ್ವರ ವೃತ್ತದಲ್ಲಿ ದಲಿತಪರ ಸಂಘಟನೆ ಹಾಗೂ ವಕೀಲರು ಪ್ರತಿಭಟನೆಯ ಕಾವು ಹೆಚ್ಚಿಸಿದರು.
ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಶೂ ಎಸೆಯಲು ಯತ್ನಿಸಿರುವುದು ನೆಪ. ಇದು ಸಂವಿಧಾನ ರಕ್ಷಕರ ಮೇಲೆ ನಡೆದ ದಾಳಿಯಾಗಿದೆ. ಇಂತ ಗೊಡ್ಡು ಬೆದರಿಕೆಯ ಮೂಲಕ ನ್ಯಾಯಾಂಗದ ವ್ಯವಸ್ಥೆ ಮೇಲೆ ಒತ್ತಡ ಹೇರುವ ಕುತಂತ್ರ ಮನುವಾದಿಗಳಿಂದ ಫಲಿಸದು ಎಂದು ಪ್ರತಿಭಟನಕಾರರು ಹೇಳಿದರು.
ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಉನ್ನತ ಸ್ಥಾನದ ನ್ಯಾಯಮೂರ್ತಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ವಕೀಲ ರಾಜೇಶ್ ಅವರನ್ನು ಗಡಿಪಾರು ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ವಕೀಲ ಆರ್.ಚೆನ್ನಬಸ್ಸು ವನದುರ್ಗ, ಸಾಲೋಮನ್ ಆಲ್ಫ್ರೇಡ್, ಮಲ್ಲಣ್ಣ ಪೂಜಾರಿ, ಸತ್ಯಮ್ಮ ಹೊಸಮನಿ, ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ದಲಿತ ಪರ ಸಂಘಟನೆಯ ಮುಖಂಡರಾದ ಶ್ರೀಶೈಲ್ ಹೊಸಮನಿ, ಮರೆಪ್ಪ ಜಾಲಿಬೆಂಚಿ,ನಾಗಣ್ಣ ಬಡಿಗೇರ, ಶರಣು ದೋರನಹಳ್ಳಿ ಸಯ್ಯದ ಖಾಲಿದ್ ಮಾತನಾಡಿದರು.
ಮುಖಂಡರಾದ ಶಿವಪುತ್ರಪ್ಪ ಜವಳಿ, ಶಿವಕುಮಾರ ತಳವಾರ, ಭೀಮರಾಯ ಹೊಸಮನಿ, ಮರೆಪ್ಪ ಪ್ಯಾಟಿ, ಹಣಮಂತರಾಯ ಟೋಕಾಪುರ, ಹೊನ್ನಪ್ಪ ರಸ್ತಾಪುರ, ಮರೆಪ್ಪ ಕ್ರಾಂತಿ, ವಕೀಲರಾದ ಸಯ್ಯದ್ ಇಬ್ರಾಹಿಂಸಾಬ್ ಜಮದಾರ, ಟಿ.ನಾಗೇಂದ್ರ, ಸಂತೋಷ ಸತ್ಯಂಪೇಟೆ, ನಾಗರಾಜ ಅರಳಹಳ್ಳಿ, ಮಲ್ಲಿಕಾರ್ಜುನ ಬುಕ್ಕಲ, ದೀಪಾಂಜಲಿ, ಆಯಿಷ್ ಪರ್ವೀನ್, ಬಲ್ಕಿಷ್ ಫಾತಿಮಾ, ಲಕ್ಷ್ಮಿ ನಾರಾಯಣ ಕುಲಕರ್ಣಿ, ಅಮರೇಶ ಇಟಗಿ, ಶರಣಪ್ಪ ಪ್ಯಾಟಿ, ಹಯ್ಯಾಳಪ್ಪ ಹೊಸಮನಿ, ದೊಡ್ಡೇಶ ದರ್ಶನಾಪುರ, ಸುಭಾಸ ರಾಂಪುರೆ ಭಾಗವಹಿಸಿದ್ದರು.
ಕೋರ್ಟ್ ಕಲಾಪದಿಂದ ದೂರ
ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ವಕೀಲರ ಸಂಘದ ಸದಸ್ಯರು ಮಂಗಳವಾರ ಕೋರ್ಟ್ ಕಲಾಪದಿಂದ ದೂರ ಉಳಿದು ತಮ್ಮ ಆಕ್ರೋಶ ಹೊರ ಹಾಕಿದರು.
ಸಂವಿಧಾನ ರಕ್ಷಕರ ಮೇಲೆ ಶೂ ಎಸೆಯಲು ಯತ್ನಿಸಿದ ದುಷ್ಟ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಇಂಥ ಬೆದರಿಕೆಯಿಂದ ವಿಚಲಿತರಾಗಬಾರದು. ಎಲ್ಲಾ ಆತಂಕ ನಿವಾರಣೆಯ ದಿವ್ಯ ಔಷಧಿ ಅಂಬೇಡ್ಕರ ನಮಗೆ ನೀಡಿದ್ದಾರೆ-ಮಲ್ಲಿಕಾರ್ಜುನ ಪೂಜಾರಿ ಪ್ರಗತಿಪರ ಚಿಂತಕ
ಶೂ ಎಸೆದಿರುವುದನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಳ್ಳುತ್ತಿರುವ ವಕೀಲನ ವಿರುದ್ಧ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿರುವುದು ನಾಚಿಗೇಡು ಸಂಗತ.-ಯೂಸೂಫ್ ಸಿದ್ದಿಕಿ ವಕೀಲರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.