ಯಾದಗಿರಿ: ‘ರಾಸಾಯನಿಕ ಬಣ್ಣಗಳಿಂದ ಮುಕ್ತವಾದ, ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರವನ್ನು ಶುದ್ಧವಾಗಿ ಇರಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಸೋಮವಾರ ವಿಜಯ ವಿಠಲ ಸೇವಾ ಸಂಸ್ಥೆ ಮತ್ತು ಶಶಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಣ್ಣಿನ ಗಣಪ ಮೂರ್ತಿಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
‘ಹಬ್ಬಗಳು ಮನುಕುಲದ ಒಳಿತಿಗಾಗಿ ಆಚರಿಸಲಾಗುವುದು. ವಾತಾವರಣಕ್ಕೆ ಹಾನಿ ಆಗದಂತೆ ಆಚರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಧಾರ್ಮಿಕ ಆಚರಣೆಗಳು ಪರಿಸರ ರಕ್ಷಣೆಯ ಕಾರ್ಯಕ್ಕೆ ಮುನ್ನುಡಿ ಆಗಬೇಕು. ಬದಲಾವಣೆಯ ಪರ್ವ ನಮ್ಮ ಮನೆಗಳಿಂದಲೇ ಆರಂಭವಾಗಲಿ’ ಎಂದರು.
ಸಹಾಯಕ ಆಯುಕ್ತ ಶ್ರೀಧರ ಗೋಟೂರ ಮಾತನಾಡಿ, ‘ಪಿಒಪಿ, ರಾಸಾಯನಿಕ ಬಣ್ಣಗಳಿರುವ ಗಣೇಶ ಮೂರ್ತಿಗಳು ಜಲಮೂಲಗಳಿಗೆ ಸೇರಿದರೆ ಜೀವಸಂಕುಲಕ್ಕೆ ಅಪಾಯ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚೆತ್ತುಕೊಂಡು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು’ ಎಂದು ಹೇಳಿದರು.
ಸಿದ್ಧಸಂಪದ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಸಿದ್ಧರಾಜರೆಡ್ಡಿ ಮಾತನಾಡಿ, ‘ನಮ್ಮ ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗೂ ಒಳಿತು ಮಾಡುವಂತಾದರೆ ಅರ್ಥಪೂರ್ಣ ಆಗುತ್ತವೆ. ಆಡಂಬರಕ್ಕೆ ಮಾರುಹೋಗಿ ಶುದ್ಧ ಭಕ್ತಿಯನ್ನು ಮರೆಯುತ್ತಿದ್ದೇವೆ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಲವೀಶ ಒರಾಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಶಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಣಮಂತಪ್ಪ ಶಿರಗೋಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪತಂಜಲಿ ಯೋಗಪೀಠದ ಅನಿಲ್ ಗುರೂಜಿ, ವಿಜಯ ವಿಠಲ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನಾಗೇಶ್ವರರಾವ ಕುಲಕರ್ಣಿ, ಮೀನುಗಾರಿಕೆ ಇಲಾಖೆ ನಿರ್ದೇಶಕ ಶರಣಬಸವ, ಶ್ರೀಹರಿ ಕಾಲೇಜಿನ ಪ್ರಾಂಶುಪಾಲ ಸುಭಾಶ್ಚಂದ್ರ ಮಾನೇಗಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.