ADVERTISEMENT

ವಡಗೇರಾ: ತೆಂಗಿನಕಾಯಿ ದರ ಏರಿಕೆ– ಕಳವಳ

ದೇವರಿಗೆ ಕಾಯಿ ಅರ್ಪಿಸಲು ಭಕ್ತರ ಮೀನಮೇಷ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:39 IST
Last Updated 26 ಆಗಸ್ಟ್ 2025, 7:39 IST
ವಡಗೇರಾ ಪಟ್ಟಣದ ಅಂಗಡಿಯೊಂದರಲ್ಲಿ ತೆಂಗಿನಕಾಯಿ ಮಾರಾಟ ಮಾಡುತ್ತಿರುವ ವ್ಯಾಪಾರಿ
ವಡಗೇರಾ ಪಟ್ಟಣದ ಅಂಗಡಿಯೊಂದರಲ್ಲಿ ತೆಂಗಿನಕಾಯಿ ಮಾರಾಟ ಮಾಡುತ್ತಿರುವ ವ್ಯಾಪಾರಿ   

ವಡಗೇರಾ: ಕಳೆದ ಒಂದು ತಿಂಗಳಿನಿಂದ ತೆಂಗಿನಕಾಯಿಯ ಬೆಲೆ ಗಗನಕ್ಕೆ ಮುಖ ಮಾಡಿದ್ದು, ಭಕ್ತರು ದೇವರಿಗೆ ಅರ್ಪಿಸಲು (ಒಡೆಯಲು) ಮೀನಮೇಷ ಎಣಿಸುವಂತಾಗಿದೆ.

ಜೂನ್ ತಿಂಗಳಲ್ಲಿ ಒಂದು ತೆಂಗಿನಕಾಯಿ ಬೆಲೆ ₹ 15ರಿಂದ ₹ 18 ಇತ್ತು. ಜುಲೈನಲ್ಲಿ ಬೆಲೆ  ₹20 ರಿಂದ ₹ 22 ಆಯಿತು. ಹಾಗೂ ಹೀಗೂ ಭಕ್ತರು ತೆಂಗಿನ ಕಾಯಿ ದೇವರಿಗೆ ಅರ್ಪಿಸುತಿದ್ದರು.

ಯಾವಾಗ ಶ್ರಾವಣ ಮಾಸ ಆರಂಭವಾಯಿತೋ ಅಂದಿನಿಂದ ದಿನೇ ದಿನೇ ತೆಂಗಿನ ಕಾಯಿ ಬೆಲೆ ಗಗನಕ್ಕೆ ಏರುತ್ತಾ ಹೋಯಿತು.ಆಗಸ್ಟ್ ತಿಂಗಳಲ್ಲಿ ಒಂದು ತೆಂಗಿನಕಾಯಿ ಬೆಲೆ ಸುಮಾರು ₹ 25ರಿಂದ₹ 30 ಆಯಿತು.

ADVERTISEMENT

ಶ್ರಾವಣ ಮಾಸದ ಶನಿವಾರ ಅಮಾವಾಸ್ಯೆಯ ದಿನ ಪಟ್ಟಣದಲ್ಲಿ ಮಾರಾಟಗಾರರು ₹ 30 ರಿಂದ ₹ 35ಕ್ಕೆ ಒಂದರಂತೆ ತೆಂಗಿನಕಾಯಿ ಮಾರಾಟ ಮಾಡಿದ್ದು ಕಂಡು ಬಂತು.

ತೆಂಗಿನಕಾಯಿ ಬೆಲೆ ಕೇಳಿ ಭಕ್ತರು ಖರೀದಿಸದೆ ಗೊಣಗುತ್ತಾ, ‘ಅದೇ ಹಣವನ್ನು ದೇವರ ಹುಂಡಿಯಲ್ಲಿ ಹಾಕುತ್ತೇವೆ’ ಎಂದು ಹೋಗುತ್ತಿರುವ ದೃಶ್ಯ ಕಂಡು ಬಂತು.ಇನ್ನೂ ಕೆಲವು ಭಕ್ತರು ಎರಡು ತೆಂಗಿನಕಾಯಿಯನ್ನು ಖರೀದಿಸುವ ಬದಲಾಗಿ ಒಂದನ್ನು ಖರೀದಿಸಿ ದೇವರ ಗುಡಿಯತ್ತ ಹೆಜ್ಜೆ ಹಾಕಿದರು.

ವಹಿವಾಟು ಕುಸಿತ: ಈ ಹಿಂದೆ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆಗೆ ತೆಂಗಿನಕಾಯಿಗಳು ಭರ್ಜರಿ ಮಾರಾಟವಾಗುತಿದ್ದವು. ಆದರೆ ಈಗ ಬೆಲೆ ಹೆಚ್ಚಾಗಿರುವ ಕಾರಣ ವಹಿವಾಟಿನಲ್ಲಿ ಕುಸಿತವಾಗಿದೆ ಎಂದು ತೆಂಗಿನಕಾಯಿ ಮಾರಾಟಗಾರರು ಹೇಳುತ್ತಾರೆ.

ಸಾಮಾನ್ಯವಾಗಿ ಈ ವರ್ಷದ ಬೆಲೆ ಅವಲೋಕಿಸಿದಾಗ ಆಗಸ್ಟ್‌ನಲ್ಲಿ ಅತಿ ಹೆಚ್ಚಿನ ಬೆಲೆಗೆ ತೆಂಗಿನಕಾಯಿ ಮಾರಾಟ ಆಗಿವೆ.

‘ಆಗಸ್ಟ್‌ ತಿಂಗಳಲ್ಲಿ ಸಗಟು ವ್ಯಾಪಾರಸ್ಥರು ಒಂದು ತೆಂಗಿನ ಕಾಯಿಯನ್ನು ಸುಮಾರು ₹ 28ರಿಂದ ₹32ಕ್ಕೆ ಸಣ್ಣ ವ್ಯಾಪಾರಸ್ಥರಿಗೆ ಸರಬರಾಜು ಮಾಡಿದ್ದಾರೆ ಎಂದು ತೆಂಗಿನಕಾಯಿ ಮಾರಾಟಗಾರರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.